ನವ ದೆಹಲಿ: ಭಾರತವನ್ನು ಬಾಧಿಸುತ್ತಿರುವ ಎಚ್3ಎನ್2 ಸೋಂಕಿಗೆ ಇನ್ನೊಂದು ಬಲಿಯಾಗಿದೆ. ಗುಜರಾತ್ನ ವಡೋದರಾದಲ್ಲಿ ಮಹಿಳೆಯೊಬ್ಬರು ಎಚ್3ಎನ್2 (H3N2) ಇನ್ಫ್ಲುಯೆಂಜಾದಿಂದ ಮೃತಪಟ್ಟಿದ್ದಾರೆ. ಇವರು ಕೆಲ ದಿನಗಳಿಂದ ಸೋಂಕಿನಿಂದ ಬಳಲುತ್ತಿದ್ದರು. ವಡೋದರಾದ ಎಸ್ಎಸ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಫಲಿಸದೆ ಮೃತಪಟ್ಟಿದ್ದಾರೆ. ಗುಜರಾತ್ನಲ್ಲಿ ಇದು ಮೊದಲ ಸಾವಾಗಿದ್ದು, ಈ ಮೂಲಕ ಭಾರತದಲ್ಲಿ ಎಚ್ಎನ್2 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಎಚ್3ಎನ್2 ಕೊರೊನಾದ ರೂಪಾಂತರಿಯಲ್ಲ. ಇದು ಇನ್ಫ್ಲುಯೆಂಜಾ ಎ ತಳಿ ವೈರಸ್‌ನ ಉಪತಳಿ. ಅಷ್ಟೊಂದು ಮಾರಣಾಂತಿಕವಲ್ಲದೆ ಇದ್ದರೂ, ಸರಿಯಾದ ಸಮಯಕ್ಕೆ ಚಿಕಿತ್ಸೆ ಬೀಳಲೇಬೇಕು. ಈ ಸೋಂಕಿಗೆ ಮೊದಲು ಮೃತಪಟ್ಟಿದ್ದು ಕರ್ನಾಟಕದ ಹಾಸನ ಜಿಲ್ಲೆಯ 82ವರ್ಷದ ವೃದ್ಧ. ಅದಾದ ಮೇಲೆ ಪಂಜಾಬ್, ಹರ್ಯಾಣದಿಂದಲೂ ಸಾವಿನ ವರದಿಯಾಗಿದೆ.
ಇದನ್ನೂ ಓದಿ: H3N2 Virus: ಎಚ್3ಎನ್2 ವೈರಸ್‌ನ ಮೂಲ ಪತ್ತೆಗಾಗಿ ಕ್ಲಿನಿಕಲ್ ಆಡಿಟ್‌ಗೆ ಮುಂದಾದ ಆರೋಗ್ಯ ಇಲಾಖೆ
ದೇಶದಲ್ಲಿ ಜನವರಿ 2ರಿಂದ ಮಾರ್ಚ್ 5ರವರೆಗೆ ಎಚ್3ಎನ್2 ಸೋಂಕಿನ 452 ಕೇಸ್ಗಳು ಪತ್ತೆಯಾಗಿದ್ದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ವಾರ ಆರೋಗ್ಯ ಇಲಾಖೆ ಈ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ದೇಶದಲ್ಲಿ ಎಚ್3ಎನ್2 ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿತ್ತು. ಈಗೀಗ ಸೋಂಕಿತರಲ್ಲಿ ಹೆಚ್ಚಿನ ಜನ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಇದಿನ್ನೂ ಹೆಚ್ಚು ವ್ಯಾಪಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಮ್ಮು, ಸೀನುವುದರಿಂದ ಸೋಂಕು ಹೆಚ್ಚಾಗಿ ಹರಡುತ್ತಿದೆ. ಸೋಂಕು ತಗುಲಿದವರಲ್ಲಿ ಶೇ.92ರಷ್ಟು ಜನರಿಗೆ ಜ್ವರ, ಶೇ.86ರಷ್ಟು ಮಂದಿಗೆ ಕೆಮ್ಮು, ಶೇ.27ರಷ್ಟು ಸೋಂಕಿತರಿಗೆ ಉಸಿರಾಟದ ತೊಂದರೆ ಕಾಣಿಸಿದೆ. ಈ ಸೋಂಕು 50 ವರ್ಷ ದಾಟಿದವರು ಹಾಗೂ 15 ವರ್ಷದೊಳಗಿನವರಿಗೆ ಹೆಚ್ಚು ಬಾಧಿಸುತ್ತಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವರದಿ ತಿಳಿಸಿದೆ.