Site icon Vistara News

ಗುಜರಾತ್‌ ಗಲಭೆ: ಫೋರ್ಜರಿ, ಪಿತೂರಿ ಮಾಡಿದ್ದ ತೀಸ್ತಾ ಸೆಟಲ್ವಾಡ್‌, ಶ್ರೀಕುಮಾರ್‌ ವಿರುದ್ಧ ಎಫ್‌ಐಆರ್‌

Gujarat Riots

ನವದೆಹಲಿ: ಗುಜರಾತ್‌ ಗಲಭೆಯಲ್ಲಿ ನರೇಂದ್ರ ಮೋದಿಯವರ ಪಾತ್ರವೇನೂ ಇಲ್ಲ ಎಂದು ಸುಪ್ರೀಂಕೋರ್ಟ್, ಜಕಿಯಾ ಜಫ್ರಿ ಅವರ ಅರ್ಜಿ ವಜಾಗೊಳಿಸಿದ ಮರುದಿನವೇ, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಮತ್ತು ನಿವೃತ್ತ ಐಪಿಎಸ್‌ ಅಧಿಕಾರಿ ಆರ್‌ಬಿ ಶ್ರೀಕುಮಾರ್‌ ವಿರುದ್ಧ ಗುಜರಾತ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇವರು ಗುಜರಾತ್‌ ಗಲಭೆ ಬಗ್ಗೆ ತುಂಬ ಸುಳ್ಳು ಮಾಹಿತಿ ಹರಡುವ ಮೂಲಕ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿದ್ದಲ್ಲದೆ, ಪ್ರಕರಣವನ್ನು ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ತಲೆಗೆ ಕಟ್ಟಲು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸುವುದು, ಫೋರ್ಜರಿ ಮಾಡುವುದು ಇತ್ಯಾದಿ ಕ್ರಿಮಿನಲ್‌ ಅಪರಾಧಗಳನ್ನು ಮಾಡಿದ್ದಾರೆ ಎಂಬ ಆರೋಪದಡಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ತೀಸ್ತಾರನ್ನು ನಿನ್ನೆ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮುಂಬೈನಲ್ಲಿ ಬಂಧಿಸಿದ್ದರು.

ಗುಜರಾತ್‌ ಗುಲ್ಬರ್ಗ್‌ ಸೊಸೈಟಿ ಗಲಭೆಯಲ್ಲಿ ನರೇಂದ್ರ ಮೋದಿ ಸೇರಿ ಇನ್ನಿತರ ಹಲವು ಹಿರಿಯ ನಾಯಕರ ಪಾತ್ರವೇನೂ ಇಲ್ಲ ಎಂದು ಗುಜರಾತ್‌ ಎಸ್‌ಐಟಿ ಕ್ಲೀನ್‌ಚಿಟ್‌ ಕೊಟ್ಟಿತ್ತು. ಆದರೆ ಆ ಕ್ಲೀನ್‌ಚಿಟ್‌ ಪ್ರಶ್ನಿಸಿ ಹಿರಿಯ ಕಾಂಗ್ರೆಸ್‌ ಸಂಸದ ಎಹ್ಸಾನ್‌ ಜಫ್ರಿ (ಗುಜರಾತ್‌ ಗಲಭೆಯಲ್ಲಿ ಮೃತಪಟ್ಟವರು) ಪತ್ನಿ ಜಕಿಯಾ ಜಫ್ರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಜಾಗೊಳಿಸಿದ ನ್ಯಾಯಾಲಯ ತೀರ್ಪು ನೀಡುವಾಗ ʼತೀಸ್ತಾ ಸೆಟಲ್ವಾಡ್‌ ಮತ್ತು ಶ್ರೀಕುಮಾರ್‌ʼ ಹೆಸರನ್ನೂ ಉಲ್ಲೇಖಿಸಿ ಅಸಮಾಧಾನ ವ್ಯಕ್ತಪಡಿಸಿದೆ. ʼಗುಜರಾತ್‌ ಗಲಭೆ ವಿಚಾರದಲ್ಲಿ ಹಲವು ಮಾದರಿಯ ಸುಳ್ಳು ಸಾಕ್ಷಿಗಳು, ತಪ್ಪಾದ ಮಾಹಿತಿಗಳಿಂದಲೇ ದೊಡ್ಡಮಟ್ಟದ ಪಿತೂರಿ ನಡೆಸಿದ್ದು ಕಾಣಿಸುತ್ತದೆ. ಆದರೆ ಹೀಗೆ ಕಟ್ಟಿದ್ದ ಸುಳ್ಳಿನ ಮನೆ, ಕಾರ್ಡ್‌ಹೌಸ್‌ನಂತೆ ಉದುರಿಬಿದ್ದಿದೆ. ಪಿತೂರಿಯಲ್ಲಿ ಕೈಜೋಡಿಸಿದವರೆಲ್ಲ ಕೋರ್ಟ್‌ ಕಟಕಟೆಯಲ್ಲಿ ನಿಲ್ಲಬೇಕು. ಅವರೆಲ್ಲರೂ ಕಾನೂನು ಕ್ರಮ ಎದುರಿಸಬೇಕುʼ ಎಂದು ತೀರ್ಪಿನಲ್ಲಿ ಉಲ್ಲೇಖಿಸಿತ್ತು.

ಇದನ್ನೂ ಓದಿ: ಗುಜರಾತ್‌ ಗಲಭೆ: ಮೋದಿಗೆ ಎಸ್‌ಐಟಿ ಕ್ಲೀನ್‌ ಚಿಟ್‌ ನೀಡಿದ್ದನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್‌

ತೀಸ್ತಾ ಸೆಟಲ್ವಾಡ್‌, ಶ್ರೀಕುಮಾರ್‌ ಜತೆಗೆ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಕೂಡ ಸುಳ್ಳು ಸಾಕ್ಷಿಯನ್ನೇ ಹೇಳಿದ್ದಾರೆ. ಅಷ್ಟು ದೊಡ್ಡ ಹಿಂಸಾಚಾರದಲ್ಲಿ ಸ್ವಲ್ಪವೂ ತಪ್ಪೇ ಇಲ್ಲದವರನ್ನು ಸಿಲುಕಿಸಲು ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದೂ ಸುಪ್ರೀಂಕೋರ್ಟ್‌ ಹೇಳಿದೆ. ಅಂದಹಾಗೇ ಈ ಸಂಜೀವ್‌ ಭಟ್‌ ಲಾಕಪ್‌ ಡೆತ್‌ ಕೇಸ್‌ವೊಂದರಲ್ಲಿ 1990ರಿಂದಲೂ ಜೈಲಿನಲ್ಲಿಯೇ ಇದ್ದಾರೆ. ಸದ್ಯ ಈ ಮೂವರ ಮೇಲೆಯೂ ಎಫ್‌ಐಆರ್‌ ದಾಖಲಿಸಲಾಗಿದೆ.

ಇದನ್ನೂ ಓದಿ: ವಿದೇಶಿ ದೇಣಿಗೆ ಪ್ರಕರಣ; ಗುಜರಾತ್‌ ಎಟಿಎಸ್‌ನಿಂದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಬಂಧನ

Exit mobile version