ಮೊರ್ಬಿ: ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿರುವ ಹಲ್ವಾಡ್ ಕೈಗಾರಿಕಾ ಪ್ರದೇಶದಲ್ಲಿರುವ ಉಪ್ಪಿನ ಕಾರ್ಖಾನೆಯ ಗೋಡೆ ಕುಸಿದು 12 ಕಾರ್ಮಿಕರು ಮೃತಪಟ್ಟಿದ್ದಾರೆ. ಈ ದುರ್ಘಟನೆ ನಡೆದಿದ್ದು ಸಾಗರ್ ಎಂಬ ಫ್ಯಾಕ್ಟರಿಯಲ್ಲಿ. ಗೋಡೆ ಕುಸಿತಗೊಂಡು ಅನೇಕರು ಅವಶೇಷಗಳಡಿ ಸಿಲುಕಿದ್ದಾರೆ. ಸದ್ಯ 12 ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬಿದ್ದ ಗೋಡೆಯಡಿ ಸಿಲುಕಿದ್ದ ಒಂದಷ್ಟು ಜನರನ್ನು ಹೊರಗೆ ತೆಗೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸ್ಥಳೀಯ ಶಾಸಕ ಮತ್ತು ರಾಜ್ಯ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆ ಸಚಿವ ಬ್ರಿಜೇಶ್ ಮೆರ್ಜಾ ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ಸಾವಿವಾರು ಉಪ್ಪಿನ ಚೀಲಗಳಿದ್ದವು. ಗೋಡೆ ಕುಸಿದಿದ್ದರಿಂದ ಆ ಚೀಲಗಳೂ ಕೂಡ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆ ನಡೆದ ಸ್ಥಳದಲ್ಲಿ ಜೆಸಿಬಿ ಮೂಲಕ ಗೋಡೆ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಇನ್ನೂ 20-30 ಮಂದಿ ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಧಾನಿಯಿಂದ ತಲಾ 2 ಲಕ್ಷ ರೂ.ಘೋಷಣೆ
ಗುಜರಾತ್‌ನ ಫ್ಯಾಕ್ಟರಿಯಲ್ಲಿ ನಡೆದ ಈ ದುರಂತದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೋವು ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ನೋವು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಮತ್ತು ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹೇಳಿದ್ದಾರೆ. ಹಾಗೇ, ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ನಿಂದ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರ ಚಿಕಿತ್ಸೆಗೆ ತಲಾ 50 ಸಾವಿರ ರೂ. ನೀಡುವುದಾಗಿ ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಹಾಗೇ, ಗುಜರಾತ್ ರಾಜ್ಯ ಸರ್ಕಾರವೂ ಕೂಡ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಪರಿಹಾರ ಘೋಷಿಸಿದೆ. ಕಾರ್ಖಾನೆಯಲ್ಲಿ ಕುಸಿದ ಗೋಡೆಯಡಿ ಸಿಲುಕಿರುವವರ ರಕ್ಷಣೆಯನ್ನು ತ್ವರಿತವಾಗಿ ಮಾಡುವಂತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೊರ್ಬಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ | ‘ಲಖನೌ’ಗೆ ನೋ ಲಕ್; ಗುಜರಾತ್‌ಗೆ ಮೊದಲ ಗೆಲುವಿನ ಸಂಭ್ರಮ