ಗಾಂಧಿನಗರ: ಮುಂಬರುವ ವಿಧಾನಸಭೆ ಚುನಾವಣೆಗಳು, 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ನಿಂದ ಸೆಪ್ಟೆಂಬರ್ 7ರಿಂದ “ಭಾರತ್ ಜೋಡೊ ಯಾತ್ರೆ” ಆರಂಭವಾಗುತ್ತದೆ. ಆದರೆ, “ಜೋಡೊ ಯಾತ್ರೆ”ಗೂ ಮುನ್ನವೇ ಪಕ್ಷದಲ್ಲಿ “ಕಾಂಗ್ರೆಸ್ ಚೋಡೊ ಯಾತ್ರೆ” (ಕಾಂಗ್ರೆಸ್ ತೊರೆಯಿರಿ-Congress Crisis) ಆರಂಭವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲೂ ಮುಖಂಡರು ಪಕ್ಷ ತೊರೆದಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುಜರಾತ್‌ಗೆ ಭೇಟಿ ನೀಡಲು ಒಂದು ದಿನ ಬಾಕಿ ಇರುವ ಮೊದಲೇ ಗುಜರಾತ್ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಸಿಂಗ್ ವಘೇಲಾ (Vishwanathsinh Vaghela) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಇವರು ಶೀಘ್ರವೇ ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 5ರಂದು ಗುಜರಾತ್‌ಗೆ ಭೇಟಿ ನೀಡಲಿದ್ದು, ಅಹಮದಾಬಾದ್‌ನಲ್ಲಿ ನಡೆಯುವ “ಪರಿವರ್ತನ್ ಸಂಕಲ್ಪ” ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನವೇ ವಿಶ್ವನಾಥ್ ಸಿಂಗ್ ವಘೇಲಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರಲ್ಲೂ, ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆಯೇ ಎಂಬ ಪ್ರಶ್ನೆಗಳು ಮೂಡಿವೆ. ಕಳೆದ ಜನವರಿಯಲ್ಲಿ ವಘೇಲಾ ಅವರು ಯುವ ಘಟಕದ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ | ವಾರದೊಳಗೆ ಕಾಂಗ್ರೆಸ್‌ಗೆ ರಾಜೀನಾಮೆ ಎಂದ ತುರುವೇಕೆರೆ ಮಾಜಿ ಶಾಸಕ ಎಂಡಿಎಲ್, ಬಳಿಕ ಬಿಜೆಪಿ ಸೇರಲೂ ತೀರ್ಮಾನ