ಪಂಜಾಬ್ನ ರೋಪಾರ್ ಜಿಲ್ಲೆಯ ಮೊರಿಂಡಾ ಪಟ್ಟಣದಲ್ಲಿರುವ ಐತಿಹಾಸಿಕ ಕೊತ್ವಾಲಿ ಸಾಹಿಬ್ ಗುರುದ್ವಾರ (Gurdwara Kotwali Sahib)ಕ್ಕೆ ಸೋಮವಾರ ಯುವಕನೊಬ್ಬ ಅಪಚಾರ ಮಾಡಿದ್ದಾನೆ. ಶೂ ಹಾಕಿಕೊಂಡು ಗುರುದ್ವಾರದ ಗರ್ಭಗುಡಿಗೆ ನುಗ್ಗಿದ ಅವನು, ಅಲ್ಲಿದ್ದ ಇಬ್ಬರು ಗ್ರಂಥಿಗಳ (ಗುರುದ್ವಾರದಲ್ಲಿ ಧಾರ್ಮಿಕ ಕಾರ್ಯ ನಡೆಸುವವರು)ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಪವಿತ್ರ ಗ್ರಂಥವನ್ನೂ ತಳ್ಳಿದ್ದಾನೆ. ಆತ ಗುರುದ್ವಾರವನ್ನು ಪ್ರವೇಶಿಸುವ ವೇಳೆ ಗ್ರಂಥಿಗಳು ಇಬ್ಬರೂ ಶ್ರೀ ಗುರು ಗ್ರಂಥ ಸಾಹೀಬ್ ಸ್ತೋತ್ರಗಳನ್ನು ಪಠಿಸುತ್ತಿದ್ದರು. ಆತನ ಗುರುದ್ವಾರವನ್ನು ಅಪವಿತ್ರಗೊಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ, ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ಆರೋಪಿಯ ಹೆಸರು ಜಸ್ವೀರ್ ಸಿಂಗ್ ಅಲಿಯಾಸ್ ಜಸ್ಸಿ ಎಂದಾಗಿದ್ದು, ಅದೇ ಮೊರಿಂಡಾ ಪಟ್ಟಣದ ನಿವಾಸಿಯೇ ಆಗಿದ್ದಾನೆ. ತಲೆ ಮೇಲೆ ಪೇಟ ಇರುವ ಸಿಖ್ ಇವನು. ಸೋಮವಾರ ಮಧ್ಯಾಹ್ನ 1.10ರ ಹೊತ್ತಿಗೆ ಕೊತ್ವಾಲಿ ಸಾಹೀಬ್ ಗುರುದ್ವಾರದ ಆವರಣಕ್ಕೆ ಬಂದಿದ್ದಾನೆ. ಗುರುದ್ವಾರದ ಒಳಹೊಕ್ಕ ಜಸ್ವೀರ್, ಗರ್ಭಗುಡಿಗೂ, ಹಾಲ್ಗೂ ನಡುವೆ ಹಾಕಲಾಗಿದ್ದ ತಡೆಬೇಲಿಯನ್ನು ದಾಟಿ ಒಳಹೋಗಿದ್ದಾನೆ. ಅಲ್ಲಿ ಕುಳಿತಿದ್ದ ಇಬ್ಬರು ಗ್ರಂಥಿಗಳಿಗೆ ಥಳಿಸಿದ್ದಾನೆ. ಹೀಗೆ ಹಲ್ಲೆಗೊಳಗಾದ ಗ್ರಂಥಿಗಳ ಹೆಸರು ಹರ್ಪಾಲ್ ಸಿಂಗ್ ಮತ್ತು ಗುರ್ಪ್ರೀತ್ ಸಿಂಗ್ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಜಸ್ವೀರ್ ಸಿಂಗ್ ಗುರುದ್ವಾರವನ್ನು ಅಪವಿತ್ರಗೊಳಿಸಿದ ಬೆನ್ನಲ್ಲೇ, ಪಟ್ಟಣದಲ್ಲಿ ಪ್ರತಿಭಟನೆ ಶುರುವಾಗಿ, ಉದ್ವಿಗ್ನ ಸ್ಥಿತಿ ಉಂಟಾಗಿತ್ತು.
ಜಸ್ವೀರ್ ಸಿಂಗ್ ಹೀಗೆ ಗುರುದ್ವಾರಕ್ಕೆ ನುಗ್ಗಿ ಅವ್ಯವಸ್ಥೆ ಸೃಷ್ಟಿಸುವ ಸಂದರ್ಭದಲ್ಲಿ ಕೆಲವು ಸ್ಥಳೀಯ ಭಕ್ತರು ಅಲ್ಲಿದ್ದರು. ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಎಳೆದುಕೊಂಡು ಹೋಗಿದ್ದಾರೆ. ಆದರೆ ಸಿಖ್ಖರು ಪ್ರತಿಭಟನೆಯನ್ನು ನಿಲ್ಲಿಸಲಿಲ್ಲ. ಪೊಲೀಸ್ ಸ್ಟೇಶನ್ ಆವರಣದಲ್ಲಿ ನೆರೆದ ಅವರು ಆರೋಪಿಯನ್ನು ತಮ್ಮ ಸುಪರ್ದಿಗೆ ಕೊಡುವಂತೆ ಆಗ್ರಹಿಸಿದರು. ಕೆಲವರಂತೂ ಖಡ್ಗ ಹಿಡಿದೇ ಬಂದು ಠಾಣೆಯ ಒಳನುಗ್ಗಲೂ ಯತ್ನಿಸಿದ್ದರು. ಆದರೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು, ಪೊಲೀಸ್ ಠಾಣೆಯ ಗೇಟ್ನ್ನೇ ಲಾಕ್ ಮಾಡಿಟ್ಟಿದ್ದರು.
ಇದನ್ನೂ ಓದಿ: Amritpal Singh: ಅಮೃತ್ ಪಾಲ್ ಸಿಂಗ್ ಪೊಲೀಸರಿಗೆ ಶರಣಾಗುವ ಸಾಧ್ಯತೆ! ಗುರುದ್ವಾರಗಳಲ್ಲಿ ಅಡಗಿರುವ ಶಂಕೆ
ಕ್ರಮ ಕೈಗೊಳ್ಳುವ ಭರವಸೆ
ಕೊತ್ವಾಲಿ ಸಾಹಿಬ್ ಗುರುದ್ವಾರಕ್ಕೆ ಅಪಚಾರ ಮಾಡಿದವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಮತ್ತು ಈ ಘಟನೆಯಲ್ಲಿ ಯಾರದ್ದೆಲ್ಲ ಕೈವಾಡ ಇದೆಯೋ, ಅವರೆಲ್ಲರಿಗೂ ಶಿಕ್ಷೆ ವಿಧಿಸುವ ಭರವಸೆ ನೀಡಿದ್ದಾರೆ. ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗಂವತ್ ಮಾನ್, ‘ಗುರುದ್ವಾರ ಕೊತ್ವಾಲಿ ಸಾಹೀಬ್ನಲ್ಲಿ ನಡೆದ ಘಟನೆ ಖಂಡನೀಯ. ತಪ್ಪಿತಸ್ಥರನ್ನು ಯಾರನ್ನೂ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ. ಪಂಜಾಬ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಅಮರಿಂದರ್ ಸಿಂಗ್ ಅವರೂ ಘಟನೆಯನ್ನು ಖಂಡಿಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.