ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ನ ವಿವಾದಾತ್ಮಕ ವಿಡಿಯೊವೊಂದು ವೈರಲ್ ಆಗಿದೆ. ಈತ ಹಲವು ಅತ್ಯಾಚಾರ ಮತ್ತು ಪತ್ರಕರ್ತನೊಬ್ಬನ ಕೊಲೆ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಪಡೆದಿರುವ ರಾಮ್ ರಹೀಮ್ ಸದ್ಯ ಪೆರೋಲ್ ಆಧಾರದಲ್ಲಿ ಹೊರಗಿದ್ದಾನೆ. ಹೀಗೆ ಜೈಲಿಂದ ಹೊರಗೆ ಬರುತ್ತಿದ್ದಂತೆ ಆತ ಖಡ್ಗದಲ್ಲಿ ಕೇಕ್ ಕತ್ತರಿಸಿ, ಭರ್ಜರಿ ಸಂಭ್ರಮ ಆಚರಣೆ ಮಾಡಿದ್ದಾಗಿ ವರದಿಯಾಗಿದೆ. ಹಾಗೇ ಫೋಟೋಗಳು-ವಿಡಿಯೊ ವೈರಲ್ ಆಗಿವೆ.
ರಾಮ್ ರಹೀಮ್ 2017ರಿಂದಲೂ ರೋಹ್ಟಕ್ನ ಸುನಾರಿಯಾ ಜೈಲಿನಲ್ಲಿಯೇ ಇದ್ದಾನೆ. ಆಗಾಗ ಆತ ಪೆರೋಲ್ ಮೇಲೆ ಹೊರಗೆ ಕೂಡ ಬರುತ್ತಾನೆ. ಹಾಗೇ ಶನಿವಾರ (ಜನವರಿ 21)ದಂದು ಕೂಡ ಅವನಿಗೆ 40 ದಿನಗಳ ಪೆರೋಲ್ ಸಿಕ್ಕಿದೆ. ಹೊರಗೆ ಬರುತ್ತಿದ್ದಂತೆ ಆತ ಫುಲ್ ಖುಷಿಯಿಂದ ಬಾಗ್‌ಪತ್‌ನಲ್ಲಿರುವ ತನ್ನ ಬರ್ನಾವಾ ಆಶ್ರಮ ಖಡ್ಗದಲ್ಲಿ ಕೇಕ್ ಕತ್ತರಿಸಿದ್ದಾನೆ. ಇದನ್ನು ನೋಡಿದ ನೆಟ್ಟಿಗರು, ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಅತ್ಯಾಚಾರ-ಕೊಲೆ ಆರೋಪಿಗೆ ಅದು ಹೇಗೆ ಹರಿಯಾಣ ಸರ್ಕಾರ ಪದೇಪದೆ ಪೆರೋಲ್ ಕೊಡುತ್ತದೆ ಎಂದೂ ಅನೇಕರು ಪ್ರಶ್ನಿಸಿದ್ದಾರೆ.
ಈ ಹಿಂದೆ 2022ರ ನವೆಂಬರ್ನಲ್ಲಿಯೂ ಒಮ್ಮೆ ಗುರ್ಮೀತ್ ರಾಮ್ ರಹೀಮ್ಗೆ ಪೆರೋಲ್ ಸಿಕ್ಕಿತ್ತು. ಆಗ ಹೊರಗಡೆ ಬಂದಿದ್ದ ಆತ ಸತ್ಸಂಗದ ಹೆಸರಲ್ಲಿ ಶಾಲಾ ಮಕ್ಕಳನ್ನೆಲ್ಲ ಸೇರಿಸಿಕೊಂಡು, ಅವರಿಗೆ ದೊಡ್ಡ ಪರದೆಯ ಮೇಲೆ ಕೊಲೆ-ಅತ್ಯಾಚಾರದ ವಿಡಿಯೊ ತುಣುಕುಗಳನ್ನು ತೋರಿಸಿದ್ದ ಎಂದೂ ಹೇಳಲಾಗಿತ್ತು.