ವಾರಾಣಸಿ: ಕಾಶಿ ವಿಶ್ವನಾಥ ಮಂದಿರದದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯ ಸರ್ವೆ ಮುಂದುವರಿಸಲು ವಾರಾಣಸಿಯ ಕೋರ್ಟ್ ಅನುಮತಿ ನೀಡಿದೆ ಮತ್ತು ಮೇ 17ರ ಒಳಗೆ ಸರ್ವೆ ವರದಿ ಸಲ್ಲಿಸಬೇಕೆಂದು ಆದೇಶಿಸಿದೆ.
ಇದೇ ವೇಳೆ, ನ್ಯಾಯಾಲಯ ಸಮೀಕ್ಷೆಗಾಗಿ ನೇಮಿಸಿದ ಕೋರ್ಟ್ ಕಮೀಷನರ್ ಅಜಯ್ ಕುಮಾರ್ ಮಿಶ್ರಾ ಅವರನ್ನು ಬದಲಾಯಿಸಬೇಕು ಎಂಬ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ (ಅಂಜುಮಾನ್ ಇನ್ತೇಜಾಮಿಯಾ ಮಸೀದಿ)ಯ ಮನವಿಯನ್ನು ತಿರಸ್ಕರಿಸಿದೆ. ಈ ನಡುವೆ ಮಿಶ್ರಾ ಅವರ ಹೊರತಾಗಿ ಇನ್ನೂ ಇಬ್ಬರು ನ್ಯಾಯವಾದಿಗಳಾದ ವಿಶಾಲ್ ಸಿಂಗ್ ಮತ್ತು ಅಜಯ್ ಸಿಂಗ್ ಅವರನ್ನು ಕಮೀಷನರ್ ಗಳಾಗಿ ನೇಮಿಸಿದೆ.
ಐದು ದಿನಗಳ ಕಾಲಾವಕಾಶ
ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಹಲವು ಸಮಯದ ಹಿಂದೆಯೇ ಕೋರ್ಟ್ ಸೂಚಿಸಿದ್ದರೂ ಮೇಲ್ಮನವಿ, ಆಕ್ಷೇಪಗಳ ಹಿನ್ನೆಲೆಯಲ್ಲಿ ಅದು ಕಾರ್ಯಗತಗೊಂಡಿರಲಿಲ್ಲ. ಇದೀಗ ಕೋರ್ಟ್ ಹೊಸ ಸೂಚನೆಯನ್ನು ನೀಡಿದ್ದು ಮೇ 13ರಿಂದ ಮೇ 17ರ ನಡುವೆ ಸಮೀಕ್ಷೆ ನಡೆಸಿ ಮೇ 17ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಮೇ 13ರ ಬೆಳಗ್ಗೆ ಎಂಟು ಗಂಟೆಯಿಂದೇ ಸರ್ವೆ ಆರಂಭಿಸಿ, ರಾತ್ರಿ 12 ಗಂಟೆವರೆಗೂ ಸರ್ವೆ ನಡೆಸಬಹುದು ಎಂದು ಹೇಳಿದೆ.
ಅಡ್ಡಿಪಡಿಸಿದರೆ ಎಫ್‌ಐಆರ್
ಕೋರ್ಟ್ ಕಮೀಷನರ್‌ಗಳು ನಡೆಸುವ ಸರ್ವೆಗೆ ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ ಕೋರ್ಟ್, ಆಡಳಿತವು ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಸರ್ವೆ ಸೂಕ್ತವಾಗಿ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದೆ.
ಮೇ 6,7ರಂದು ನಡೆಯಬೇಕಿತ್ತು
ಕಾಶಿ ವಿಶ್ವನಾಥ ಮಂದಿರ-ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಮಾ ಶೃಂಗಾರ್ ಗೌರಿ ಸ್ಥಳದಲ್ಲಿ ವಿಡಿಯೊಗ್ರಾಫಿಕ್ ಸರ್ವೆ ನಡೆಸುವಂತೆ ಕೋರ್ಟ್ ಆದೇಶಿಸಿದ ಬಳಿಕ ಮೇ 6 ಮತ್ತು ಮೇ 7ರಂದು ನಡೆಸಲು ದಿನ ನಿಗದಿ ಮಾಡಲಾಗಿತ್ತು. ಆದರೆ, ಸ್ಥಳೀಯ ಮುಸ್ಲಿಮರದ ವಿರೋಧದಿಂದ ಸಮೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ.
ಕೋರ್ಟ್ ಕಮೀಷನರ್ ಮಿಶ್ರಾ ಅವರು ಹಿಂದೂಗಳಿಗೆ ಪರವಾಗಿ ವರ್ತಿಸುತ್ತಿದ್ದಾರೆ. ಮಸೀದಿಯ ಹೊರಾವರಣದಲ್ಲಿ ಮಾತ್ರ ವಿಡಿಯೊಗ್ರಫಿಗೆ ಸೂಚಿಸಿದ್ದರೂ ಬೇರೆ ಭಾಗಗಳ ವಿಡಿಯೊ ಚಿತ್ರೀಕರಣಕ್ಕೂ ಮುಂದಾಗಿದ್ದಾರೆ ಎಂದು ಮಸೀದಿ ಆಡಳಿತ ಮಂಡಳಿ ಆಕ್ಷೇಪಿಸಿತ್ತು.
ಮಿಶ್ರಾ ಮತ್ತು ಹಿಂದೂ ಹಾಗೂ ಮುಸ್ಲಿಮರನ್ನು ಪ್ರತಿನಿಧಿಸುವ ವಕೀಲರು ಕಳೆದ ಶನಿವಾರ ಜ್ಞಾನವಾಪಿ-ಶೃಂಗಾರ ಗೌರಿ ದೇವಾಲಯದ ಆವರಣಕ್ಕೆ ಹೋಗಿದ್ದರು. ಸುಮಾರು ಎರಡು ಗಂಟೆ ಕಾಲ ಕಳೆದರೂ ಅವರಿಗೆ ಅಲ್ಲಿ ಸರ್ವೆ ನಡೆಸಲು ಸಾಧ್ಯವಾಗಿರಲಿಲ್ಲ. ಬಳಿಕ ಅವರು ಅಲ್ಲಿಂದ ಹೊರಬಂದಿದ್ದರು.
ತಮಗೆ ಮಸೀದಿ ಪ್ರದೇಶವನ್ನು ಪ್ರವೇಶಿಸಲು ಅವಕಾಶ ಕೊಡಲಿಲ್ಲ. ಹಾಗಾಗಿ ಸರ್ವೆ ನಡೆಸಲು ಸಾಧ್ಯವಾಗಲಿಲ್ಲ. ಜಿಲ್ಲಾಡಳಿತವೂ ತಮಗೆ ಸಹಕಾರ ನೀಡಲಿಲ್ಲ ಎಂದು ವಕೀಲರು ಆಪಾದಿಸಿದ್ದರು.
ಐವರು ಮಹಿಳೆಯರ ಮನವಿ
ವಾರಾಣಸಿ ನ್ಯಾಯಾಲಯವು ಸರ್ವೆಗೆ ಆದೇಶ ಮಾಡಲು ಕಾರಣವಾಗಿದ್ದು ಐವರು ಮಹಿಳೆಯರು ಮಾಡಿಕೊಂಡ ಒಂದು ಮನವಿ. ಮಸೀದಿಯ ಪಶ್ಚಿಮ ಗೋಡೆಯ ಪಕ್ಕದಲ್ಲಿರುವ ಮೂರ್ತಿಗಳನ್ನು ಪೂಜಿಸಲು ತಮಗೆ ಅನುಮತಿ ನೀಡಬೇಕು ಎಂದು ಐವರು ಮಹಿಳೆಯರು ಕೋರ್ಟನ್ನು ಕೋರಿದ್ದರು.
ಮುಂದೇನು?
ಇದೀಗ ಕೋರ್ಟ್‌ನ ಹೊಸ ಆದೇಶ ಹಿಂದುಗಳ ಪರವಾಗಿ ಆಗಿದೆ ಎಂದು ವ್ಯಾಖ್ಯಾನಿಸಲಾಗಿದೆ. ಇದರಂತೆ ಶುಕ್ರವಾರ ಬೆಳಗಿನಿಂದಲೇ ಸರ್ವೆ ಆರಂಭವಾಗಲಿದೆ. ಜ್ಞಾನವಾಪಿ ಮಸೀದಿಯ ಪರಿಸರದಲ್ಲಿ ಸ್ವಸ್ತಿಕ್ ಮೊದಲಾದ ಹಿಂದೂ ಚಿಹ್ನೆಗಳು, ದೇವರ ಮೂರ್ತಿಗಳು ಇರುವುದರಿಂದ ಅದರ ದಾಖಲಾತಿ ಮೂಲಕ ಈ ಮಸೀದಿಯ ಭಾಗವ ಹಿಂದೂಗಳಿಗೆ ಸೇರಿದ್ದು ಎನ್ನುವುದು ಶ್ರುತವಾಗಲಿದೆ ಎನ್ನುವುದು ಹಿಂದೂಗಳ ಆಸೆ. ಆದರೆ, ವಾರಾಣಸಿಯ ಮುಸ್ಲಿಂ ವಲಯ ಇದನ್ನು ಆಕ್ಷೇಪಿಸುತ್ತಿದೆ. ಒಟ್ಟಿನಲ್ಲಿ ಸಮೀಕ್ಷೆಯ ಮೂಲಕ ಹಲವು ಹೊಸ ವಿಚಾರಗಳು ಬಯಲಿಗೆ ಬರಲಿವೆ ಎನ್ನುವ ನಿರೀಕ್ಷೆಯಂತೂ ಇದ್ದೇ ಇದೆ.