ವಾರಾಣಸಿ: ಭಾರಿ ಕುತೂಹಲ ಕೆರಳಿಸಿರುವ ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದ ವಿಡಿಯೊಗ್ರಫಿ ಸರ್ವೆ ವರದಿಯನ್ನು ಗುರುವಾರ ವಾರಾಣಸಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಆದರೆ, ಈ ವಿಚಾರಕ್ಕೆ ಸಂಬಂಧಿಸಿ ಯಾವುದೇ ತೀರ್ಪು ನೀಡಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದ್ದರಿಂದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು. ಸುಪ್ರೀಂಕೋರ್ಟ್ ಈ ಪ್ರಕರಣದ ಬಗ್ಗೆ ಶುಕ್ರವಾರ ಮಹತ್ವದ ವಿಚಾರಣೆ ನಡೆಸಲಿದೆ.
ಸ್ಥಳೀಯ ನ್ಯಾಯಾಲಯದ ಸೂಚನೆಯಂತೆ ಜ್ಞಾನವಾಪಿ ಮಸೀದಿ ಆವರಣದಲ್ಲಿ ಮೂರು ದಿನಗಳ ಕಾಲ ನಡೆಸಿದ ವಿಡಿಯೊಗ್ರಫಿಯ ವಿವರ ವರದಿಯನ್ನು ಮೂರು ಫೋಲ್ಡರ್‌ಗಳಲ್ಲಿ ಇಟ್ಟು ಸೀಲ್ ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ವರದಿಯ ಜತೆಗೆ ವಿಡಿಯೊಗ್ರಫಿಯ ಸಮಗ್ರ ಚಿತ್ರಣ ಹಾಗೂ ಫೋಟೊಗಳನ್ನು ಒಳಗೊಂಡ ಚಿಪ್ ಒಂದನ್ನು ಕೂಡಾ ಕೋರ್ಟ್‌ಗೆ ಸಲ್ಲಿಸಲಾಯಿತು ಎಂದು ಕೋರ್ಟ್ ನಿಯೋಜಿತ ಕಮೀಷನರ್ ವಿಶಾಲ್ ಸಿಂಗ್ ತಿಳಿಸಿದರು.
Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?
ವರದಿಯನ್ನು ಸ್ವೀಕರಿಸಿದ ಕೋರ್ಟ್, ಜ್ಞಾನವಾಪಿ ಮಸೀದಿ ಆವರಣದಲ್ಲಿ ಚಿತ್ರೀಕರಣ ನಡೆಸಲು ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸುವುದಾಗಿ ಹೇಳಿದ್ದು, ಅಲ್ಲಿವರೆಗೆ ಯಾವುದೇ ಆದೇಶ ನೀಡಬಾರದು ಎಂದು ಸೂಚಿಸಿದೆ ಎಂದು ಹೇಳಿತು.
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಹಿಂದೂ ದೇವರ ಚಿತ್ರಗಳಿದ್ದು, ಅದರ ಒಂದು ಗೋಡೆಯ ಬಳಿ ಪೂಜೆ ಸಲ್ಲಿಸಲು ಅವಕಾಶ ಸಲ್ಲಿಸಬೇಕು ಎಂದು ಆಗ್ರಹಿಸಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ ಮೂಲ ಅರ್ಜಿಗೆ ಸಂಬಂಧಿಸಿ ಈಗ ಮಹತ್ವದ ಬೆಳವಣಿಗೆಗಳು ಸಂಭವಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಸಮೀಕ್ಷೆಯ ಸಂದರ್ಭದಲ್ಲಿ ಮಸೀದಿಯ ಮುಂದಿನ ಕೊಳದಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ ಎಂಬ ಸುದ್ದಿ ಹರಡಿದ ಬಳಿಕ ಕಾವು ತೀವ್ರಗೊಂಡಿದೆ.
ವರದಿಯಲ್ಲೇನಿದೆ?
ಕೋರ್ಟ್ ಕಮಿಷನರ್ ಸಲ್ಲಿಸಿರುವ ವರದಿಯಲ್ಲಿ ಏನೇನು ಅಂಶಗಳಿವೆ ಎನ್ನುವ ಬಗ್ಗೆ ಈಗ ಎಲ್ಲ ಕಡೆ ಕುತೂಹಲ ಮೂಡಿದೆ. ಹಿಂದೆ ಕೋರ್ಟ್ ಕಮಿಷನರ್ ಆಗಿದ್ದ ಅಜಯ್ ಕುಮಾರ್ ಮಿಶ್ರಾ ಅವರು ಸರ್ವೆಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆಪಾದಿಸಿ ಅವರನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿತ್ತು. ಹಾಗಿದ್ದರೆ ಪ್ರಸಕ್ತ ಸುದ್ದಿಯಾಗಿರುವ ಶಿವಲಿಂಗ ಪತ್ತೆ ವಿಚಾರ ನಿಜಕ್ಕೂ ನಿಜವೇ? ವರದಿಯಲ್ಲಿ ಅದರ ಉಲ್ಲೇಖವಿದೆಯೇ ಎನ್ನುವುದನ್ನು ಎಲ್ಲರೂ ಕಾಯುತ್ತಿದ್ದಾರೆ. ಶಿವಲಿಂಗವನ್ನು ಹೊರತುಪಡಿಸಿ ಹಲವಾರು ವಿಚಾರಗಳು ಈ ವರದಿಯಲ್ಲಿ ಇರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.