ವಾರಾಣಸಿ: ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ (Gyanvapi Case) ಪ್ರಕರಣದ ಕುರಿತು ವಾರಾಣಸಿ ನ್ಯಾಯಾಲಯವು ಗುರುವಾರ ವಿಚಾರಣೆ ನಡೆಸಿದ್ದು, ಮುಸ್ಲಿಂ ಪರ ಅರ್ಜಿದಾರರಿಗೆ ನ್ಯಾಯಾಲಯ ನೋಟಿಸ್ ನೀಡಿದೆ. “ಮಸೀದಿಯಲ್ಲಿ ಸಿಕ್ಕ ಶಿವಲಿಂಗದ ಕಾರ್ಬನ್ ಡೇಟಿಂಗ್ ಮಾಡಲು ಅನುಮತಿ ನೀಡಬೇಕು” ಎಂದು ಹಿಂದೂಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸುವಂತೆ ಮುಸ್ಲಿಂ ಪಾರ್ಟಿಗಳಿಗೆ ಕೋರ್ಟ್ ನೋಟಿಸ್ ನೀಡಿದೆ.
ಯಾವುದೇ ಪುರಾತನ ವಸ್ತು ಅಥವಾ ಪಳೆಯುಳಿಕೆಯ ಕಾಲಾವಧಿ ಪತ್ತೆ ಹಚ್ಚುವ ವಿಧಾನವೇ ಕಾರ್ಬನ್ ಡೇಟಿಂಗ್ ಆಗಿದೆ. “ಮಸೀದಿಯ ಬಾವಿಯಲ್ಲಿ ಪತ್ತೆಯಾಗಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೂಚಿಸಬೇಕು” ಎಂದು ಹಿಂದೂಗಳ ಪರ ವಕೀಲರು ವಾದ ಮಂಡಿಸಿದರು. ಆಗ, ನೋಟಿಸ್ ನೀಡಿದ ನ್ಯಾಯಾಲಯವು ಸೆ.೨೯ಕ್ಕೆ ವಿಚಾರಣೆ ಮುಂದೂಡಿತು.
ಜ್ಞಾನವಾಪಿ ಮಸೀದಿಯಲ್ಲಿರುವ ಶೃಂಗಾರ ಗೌರಿ ದೇವಾಲಯದಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂದು ಹಿಂದೂ ಮಹಿಳೆಯರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಸೀದಿಯ ವಿಡಿಯೊ ಸಮೀಕ್ಷೆ ಸಹ ನಡೆದಿದೆ. ಹಿಂದೂಗಳ ಅರ್ಜಿಯ ವಿಚಾರಣೆಗೆ ಇತ್ತೀಚೆಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು. ಅದರಂತೆ, ಗುರುವಾರ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ | ಜ್ಞಾನವಾಪಿ ಮಸೀದಿ ಕೇಸ್; ಶಿವಲಿಂಗ ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ವಿಚಾರಣೆ ಒಪ್ಪದ ಸುಪ್ರೀಂಕೋರ್ಟ್