ಜ್ಞಾನವಾಪಿ ಮಸೀದಿ (Gyanvapi Masjid Case)ಯನ್ನು ಸರ್ವೇ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಿದ್ದ ವಾರಾಣಸಿ ಕೋರ್ಟ್‌ನ ತೀರ್ಪಿನ ವಿರುದ್ಧ ಅಂಜುಮನ್ ಇಂತೇಜಾಮಿಯಾ ಮಸೀದಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಜ್ಞಾನವಾಪಿ ಮಸೀದಿ ಪ್ರಕರಣವನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯದ ಅನುಭವಿ ನ್ಯಾಯಾಧೀಶರು ವಿಚಾರಣೆ ನಡೆಸುವುದು ಸೂಕ್ತ ಎಂದು ಹೇಳಿದೆ. ಹಾಗೇ, ರಾಷ್ಟ್ರದ ಹಿತಾಸಕ್ತಿ ರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂಬುದನ್ನು ಯಾರೂ ಮರೆಯಬಾರದು ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದ್ದಾರೆ.
ಮಸೀದಿಯೊಳಗೆ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಸಲ್ಲಿಕೆಯಾದ ದಾವೆಯ ವಿಚಾರಣೆಯನ್ನೂ ವಾರಾಣಸಿ ಜಿಲ್ಲಾ ನ್ಯಾಯಾಧೀಶರೇ ನಡೆಸುವುದು ಒಳ್ಳೆಯದು. ವಿಚಾರಣೆ ಮುಗಿದು ಮುಸ್ಲಿಂ ಸಮಿತಿಯ ಅರ್ಜಿಗೆ ಸಂಬಂಧಪಟ್ಟಂತೆ ಜಿಲ್ಲಾ ನ್ಯಾಯಾಲಯದ ಮಧ್ಯಂತರ ಆದೇಶ ಹೊರಬೀಳುವವರೆಗೂ ಶಿವಲಿಂಗ ಪತ್ತೆಯಾಗಿರುವ ಪ್ರದೇಶದ ಸಂರಕ್ಷಣೆ ಮಾಡಬೇಕು ಮತ್ತು ನಮಾಜ್‌ಗಾಗಿ ಮುಸ್ಲಿಮರಿಗೆ ಮುಕ್ತ ಅವಕಾಶ ನೀಡಬೇಕು ಎಂದೂ ಸುಪ್ರೀಂಕೋರ್ಟ್ ಹೇಳಿದೆ. ಹಾಗೇ, ಈ ಪ್ರಕರಣವನ್ನು ಜಿಲ್ಲಾ ನ್ಯಾಯಾಲಯದ ಅನುಭವಿ ಮತ್ತು ಪ್ರಸ್ತುತ ಬೆಳವಣಿಗೆಯ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ನ್ಯಾಯಾಧೀಶರೇ ನಿರ್ವಹಿಸಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?
ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಹುಜೇಫಾ ಅಹ್ಮದಿ, ಜ್ಞಾನವಾಪಿ ಮಸೀದಿ ವಿಡಿಯೋಗ್ರಫಿ ಸರ್ವೇಗಾಗಿ ಕೋರ್ಟ್ ಕಮಿಷನರ್‌ರನ್ನು ನಿಯೋಜಿಸಿದ್ದಕ್ಕೆ ವಿರೋಧವಿದೆ. ಸರ್ವೇ ವರದಿ ಕೋರ್ಟ್‌ಗೆ ಸಲ್ಲಿಕೆಯಾಗಿದ್ದರೂ, ಈಗಾಗಲೇ ಅದರ ಆಯ್ದ ಭಾಗಗಳು ಸೋರಿಕೆಯಾಗಿದ್ದು, ಬಹಿರಂಗಗೊಂಡಿದೆ. ಫಿರ್ಯಾದಿದಾರರು ನೀಡಿದ ಮಾಹಿತಿಯನ್ನು ಬದಲಾಯಿಸಿದ್ದೂ ಗಮನಕ್ಕೆ ಬಂದಿದೆ ಎಂದು ಹೇಳಿದ್ದರು. ಸರ್ವೇ ವೇಳೆ ಶಿವಲಿಂಗ ಪತ್ತೆಯಾಗಿದ್ದನ್ನು ವಕೀಲರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದನ್ನು ಉಲ್ಲೇಖಿಸಿ, ಈ ವಿಚಾರವನ್ನು ಹೇಳಿದ್ದರು. ಅಹ್ಮದಿ ಈ ವಾದಕ್ಕೆ ಪ್ರತಿವಾದ ಮಂಡಿಸಿದ್ದ ಹಿಂದೂ ಪರ ವಕೀಲ ಸಿಎಸ್ ವೈದ್ಯನಾಥನ್, ಮುಸ್ಲಿಮರು ಸಲ್ಲಿಸಿರುವ ಅರ್ಜಿಯಲ್ಲಿ ಹುರುಳಿಲ್ಲ. ಕೋರ್ಟ್ ಕಮಿಷನರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸುವುದೇ ಸೂಕ್ತ ಎಂದಿದ್ದರು.
ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಆಯೋಗ ಕೋರ್ಟ್‌ಗೆ ಸಲ್ಲಿಸಿರುವ ಜ್ಞಾನವಾಪಿ ಮಸೀದಿ ವಿಡಿಯೋಗ್ರಫಿ ಸಮೀಕ್ಷೆ ವರದಿಯನ್ನು ಯಾವ ಕಾರಣಕ್ಕೂ ಸೋರಿಕೆ ಮಾಡುವಂತಿಲ್ಲ. ಪ್ರತಿಯೊಂದನ್ನೂ ಮಾಧ್ಯಮಗಳ ಎದುರು ಹೇಳುವಂತಿಲ್ಲ. ಮುಚ್ಚಿದ ಲಕೋಟೆಯಲ್ಲಿ ನೀಡಿದ ವರದಿಯನ್ನು, ವಿಚಾರಣೆ ನಡೆಸುವ ನ್ಯಾಯಾಧೀಶರೇ ತೆರೆಯಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸರ್ವೆ ವರದಿ ಸಲ್ಲಿಸಿದ ಕಮಿಷನರ್, ನಾಳೆ ಸುಪ್ರೀಂ ವಿಚಾರಣೆ