Site icon Vistara News

Har Ghar Jal Utsav | ರಾಷ್ಟ್ರ ಕಟ್ಟಲು ಪರಿಶ್ರಮಿಸುತ್ತಿದೆ ನಮ್ಮ ಸರ್ಕಾರ: ಪ್ರಧಾನಿ ಮೋದಿ

PM Modi Goa

ನವ ದೆಹಲಿ: ದೇಶದ ಬಗ್ಗೆ ಕಾಳಜಿ ಇಲ್ಲದ ಜನರು, ಈ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಅಸಡ್ಡೆ ಹೊಂದಿರುತ್ತಾರೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಗೋವಾದಲ್ಲಿ ಆಯೋಜಿಸಲಾಗಿದ್ದ ಹರ್​ ಘರ್​ ಜಲ್ (Har Ghar Jal Utsav )​ ಕಾರ್ಯಕ್ರಮ ಉದ್ದೇಶಿಸಿ, ವರ್ಚ್ಯುವಲ್​ ಆಗಿ ಮಾತನಾಡಿದ ಅವರು, ತಮ್ಮ ಎನ್​ಡಿಎ ಸರ್ಕಾರದ ಎಂಟು ವರ್ಷದ ಆಡಳಿತವನ್ನು ಹೊಗಳಿದರು. ‘ಸರ್ಕಾರ ರಚನೆ ಸುಲಭ. ಆದರೆ ಅದನ್ನು ರಚಿಸಿ ಸುಮ್ಮನಾಗುವುದಲ್ಲ. ಬಿಜೆಪಿ ಸರ್ಕಾರ ಇಡೀ ರಾಷ್ಟ್ರಕಟ್ಟುವ ದಾರಿಯಲ್ಲಿ ಸಾಗುತ್ತಿದೆ. ಈ ಹಾದಿಯಲ್ಲಿ ಸಾಕಷ್ಟು ಪರಿಶ್ರಮದ ಅಗತ್ಯವಿದೆ’ ಎಂದು ಹೇಳಿದರು.

ಈ ದೇಶದ ಬಗ್ಗೆ ಕಾಳಜಿ ಇಲ್ಲದವರು ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ತಾವು ಸ್ವಚ್ಛವಾದ ನೀರು ಕೊಡುವುದಾಗಿ ಈ ಹಿಂದಿನ ಸರ್ಕಾರ ಭರವಸೆಯನ್ನೇನೋ ಕೊಟ್ಟಿತ್ತು. ಆದರೆ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅದು ಕೆಲಸ ಮಾಡಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಗ್ರಾಮೀಣ ಪ್ರದೇಶಗಳಿಗೂ ಸ್ವಚ್ಛವಾದ ನೀರು ಕೊಳವೆ ಮೂಲಕ ಪೂರೈಕೆಯಾಗುತ್ತಿದೆ. ನಮ್ಮ ಸರ್ಕಾರ ಎಲ್ಲ ಭರವಸೆಯನ್ನೂ ಈಡೇರಿಸಿದೆ. ಈಗ ಸುಮಾರು 10 ಕೋಟಿಗಳಷ್ಟು ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ವ್ಯವಸ್ಥೆ ಪಡೆದಿವೆ ಎಂದು ಹೇಳಿದರು. ‘ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಕೇವಲ 3 ಕೋಟಿ ಗ್ರಾಮೀಣ ಕುಟುಂಬಗಳಿಗಷ್ಟೇ ನಲ್ಲಿ ನೀರಿನ ಸಂಪರ್ಕ ಪಡೆದಿದ್ದವು. ಆದರೆ ನಾವು ಕೇವಲ ಮೂರು ವರ್ಷಗಳಲ್ಲಿ 7 ಕೋಟಿ ಕುಟುಂಬಗಳಿಗೆ ಈ ಸೌಕರ್ಯ ಒದಗಿಸಿದ್ದೇವೆ ಎಂದೂ ಪ್ರಧಾನಿ ಮೋದಿ ಹೇಳಿದರು.

ಪ್ರತಿ ಮನೆಯಲ್ಲೂ ಸೂಕ್ತ ನೀರಿನ ಪೂರೈಕೆ ವ್ಯವಸ್ಥೆ ಹೊಂದಿರುವ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಗೋವಾ ಪಾತ್ರವಾಗಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಅದಕ್ಕಾಗಿ ಗೋವಾ ರಾಜ್ಯದ ಜನರಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಿದ ಅವರು, ‘ವಿವಿಧ ರಾಜ್ಯಗಳ ಒಂದು ಲಕ್ಷಕ್ಕೂ ಹೆಚ್ಚು ಗ್ರಾಮಗಳು ಬಯಲು ಶೌಚ ಮುಕ್ತವೆಂಬ ಸರ್ಟಿಫಿಕೇಟ್​ ಪಡೆದಿವೆ ’ ಎಂದರು.

ಇದನ್ನೂ ಓದಿ: ಎಲ್ಲರೂ ಒಟ್ಟಾಗಿ ಕುಳಿತು ದೂರದರ್ಶನದಲ್ಲಿ ಸ್ವರಾಜ್ ವಿಶೇಷ ಸರಣಿ ವೀಕ್ಷಿಸಿದ ಪ್ರಧಾನಿ ಮೋದಿ, ಕೇಂದ್ರ ಸಚಿವರು

Exit mobile version