Site icon Vistara News

Har Ghar Tiranga | ರಾಷ್ಟ್ರಧ್ವಜಗಳನ್ನು ಮಕ್ಕಳಿಗೆ ಹಂಚಿ, ಸಂಭ್ರಮಿಸಿದ ಪ್ರಧಾನಿ ಮೋದಿ ತಾಯಿ

Heeraben

ಗಾಂಧಿನಗರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹರ್​ ಘರ್​ ತಿರಂಗಾ ಅಭಿಯಾನದಲ್ಲಿ, ಅವರ ತಾಯಿ ಹೀರಾಬೆನ್ ಮೋದಿ ಕೂಡ ಪಾಲ್ಗೊಂಡಿದ್ದಾರೆ. ಗುಜರಾತ್​ನ ಗಾಂಧಿನಗರದಲ್ಲಿರುವ ಅವರ ಮನೆಯ ಮೇಲೆ ರಾಷ್ಟ್ರಧ್ವಜ ಹಾರಾಡಿದೆ. ಹಾಗೇ, ಮನೆಯೆದುರು ಕುರ್ಚಿಯಲ್ಲಿ ಕುಳಿತು, ಪುಟ್ಟ ಮಕ್ಕಳಿಗೆ ರಾಷ್ಟ್ರಧ್ವಜ ಹಂಚಿದ್ದಾರೆ. ಹೀರಾಬೆನ್, ಮಕ್ಕಳೊಂದಿಗೆ ಸೇರಿ ರಾಷ್ಟ್ರಧ್ವಜ ಹಾರಿಸಿದ ಫೋಟೋಗಳು ವೈರಲ್​ ಆಗಿವೆ.

ಮಗ ಪ್ರಧಾನಿಯಾಗಿದ್ದರೂ, ಗಾಂಧಿನಗರದ ಮನೆಯೊಂದರಲ್ಲಿ ಅತ್ಯಂತ ಸರಳವಾಗಿ ಜೀವಿಸುತ್ತಿರುವ ಶತಾಯುಷಿ ಹೀರಾಬೆನ್​​, ಯಾವುದೇ ಚುನಾವಣೆಯಲ್ಲೂ ತಪ್ಪದೆ ಮತ ಚಲಾಯಿಸುತ್ತಾರೆ. ಇದೇ ವರ್ಷ ಜೂನ್​ 18ರಂದು ತಮ್ಮ ನೂರನೇ ವರ್ಷದ ಹುಟ್ಟುಹಬ್ಬವನ್ನು ಅವರು ಆಚರಿಸಿಕೊಂಡಿದ್ದಾರೆ. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ತಾಯಿಯನ್ನು ಭೇಟಿಯಾಗಿ ಅವರ ಪಾದ ತೊಳೆದು ಪೂಜೆ ಮಾಡಿದ್ದರು. ಅಮ್ಮನ ಆಶೀರ್ವಾದ ಪಡೆದಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಬಂದ 75ನೇ ವರ್ಷವನ್ನು ವಿಶೇಷವಾಗಿ ಆಚರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ಕಳೆದ ವರ್ಷ ಆಜಾದಿ ಕಾ ಅಮೃತ್​ ಮಹೋತ್ಸವ ಉಪಕ್ರಮ ಪ್ರಾರಂಭ ಮಾಡಿದೆ. ಅದರ ಒಂದು ಭಾಗವಾಗಿ ಆಗಸ್ಟ್​ 13ರಿಂದ 15ರವರೆಗೆ ಹರ್​ ಘರ್​ ತಿರಂಗಾ ಅಭಿಯಾನ ಹಮ್ಮಿಕೊಂಡಿದೆ. ಕಳೆದ ಬುಧವಾರ ಸೂರತ್​ನಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕ ತಿರಂಗ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಈ ಐತಿಹಾಸಿಕ ಸ್ವಾತಂತ್ರ್ಯೋತ್ಸವಕ್ಕಾಗಿ ನಾವು ಕಾಯುತ್ತಿದ್ದೆವು. ನಮ್ಮ ಭಾರತ ಧ್ವಜದಲ್ಲಿರುವ ಬಣ್ಣಗಳು ಕೇವಲ ಬಣ್ಣಗಳಲ್ಲ, ನಮ್ಮ ದೇಶದ ಇತಿಹಾಸ, ವರ್ತಮಾನದ ಬದ್ಧತೆ ಮತ್ತು ಭವಿಷ್ಯದ ಕನಸಿನ ಸಂಕೇತ ಎಂದು ಹೇಳಿದ್ದರು.

ಇದನ್ನೂ ಓದಿ: Har Ghar Tiranga Haveri | ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಮೋದಿಗೆ ಪತ್ರ ಬರೆದ 4 ವರ್ಷದ ಪೋರಿ

Exit mobile version