Site icon Vistara News

Video| ‘ಕುಡಿದು ರಾಜ್ಯವನ್ನು ಡ್ರೈವ್​ ಮಾಡ್ತಿದ್ದಾರೆ’; ಪಂಜಾಬ್​ ಸಿಎಂಗೆ ಹರ್ಸಿಮೃತ್​ ಕೌರ್​ ಹಿಗ್ಗಾಮುಗ್ಗ ಬೈಗುಳ, ದೊಡ್ಡದಾಗಿ ನಕ್ಕ ಅಮಿತ್​ ಶಾ

Amit Shah

ನವ ದೆಹಲಿ: ಶಿರೋಮಣಿ ಅಕಾಲಿ ದಳ​ (ಎಸ್​ಎಡಿ)ದ ಸಂಸದೆ ಹರ್ಸಿಮೃತ್​ ಕೌರ್​ ಬಾದಲ್​ ಅವರು ಇಂದು ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ವಿರುದ್ಧ ಲೋಕಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್​​ನಲ್ಲಿ ಹೆಚ್ಚಿದ ಮಾದಕ ದ್ರವ್ಯ ಬಳಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ವಿಚಾರಕ್ಕೆ ಅವರು ಮಾನ್​​ ವಿರುದ್ಧ ಕಿಡಿಕಾರಿದ್ದಾರೆ. ಹರ್ಸಿಮೃತ್​ ಕೌರ್​ ಬಾದಲ್​ ಅವರು ಭಗವಂತ್ ಮಾನ್​​ಗೆ ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದರೆ, ಗೃಹ ಸಚಿವ ಅಮಿತ್​ ಶಾ, ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಮತ್ತು ಇತರ ಹಲವು ಸಂಸದರೆಲ್ಲ ನಗುತ್ತಿರುವುದು ಕಂಡುಬಂತು.

ಸಂಸತ್​​ನಲ್ಲಿ ಮಾತನಾಡಿದ ಸಂಸದೆ ಹರ್ಸಿಮೃತ್​ ಕೌರ್​ ಬಾದಲ್, ‘ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಕೆಲವೇ ತಿಂಗಳುಗಳ ಹಿಂದೆ ಇದೇ ಸಂಸತ್ತಿನ ಮೂಲೆಯೊಂದರಲ್ಲಿ ಕುಳಿತುಕೊಳ್ಳುತ್ತಿದ್ದರು​. ಬೆಳಗ್ಗೆಯೇ ಅದೇನು ತಿಂದು-ಕುಡಿದು ಬರುತ್ತಿದ್ದರೋ ಗೊತ್ತಿಲ್ಲ. ಸದಾ ಅಮಲೇರಿಸಿಕೊಂಡಿರುತ್ತಿದ್ದರು. ಅವರ ಪಕ್ಕ ಕುಳಿತುಕೊಳ್ಳಲು ಯಾರೂ ಮುಂದೆ ಬರುತ್ತಿರಲಿಲ್ಲ. ಅವರ ಪಕ್ಕ ಕುಳಿತುಕೊಂಡವರೆಲ್ಲ ‘ನಮ್ಮ ಸೀಟ್​ ಬದಲಿಸಿಕೊಡಿ’ ಎಂದು ಸ್ಪೀಕರ್​ ಬಳಿಯೇ ಕೇಳುತ್ತಿದ್ದರು. ಈ ಹಿಂದಿನ ಸ್ಪೀಕರ್​​ನ ಕೇಳಿನೋಡಿ, ಅವರ ಬಳಿಯಂತೂ ಅದೆಷ್ಟು ಮಂದಿ ಹೋಗಿ, ಮಾನ್​ ಬಗ್ಗೆ ದೂರಿದ್ದಾರೆ ಲೆಕ್ಕವಿಲ್ಲ. ಒಟ್ಟಿನಲ್ಲಿ ಜಾಗ ಬದಲಿಸಿಕೊಂಡು ಹೋಗುತ್ತಿದ್ದರು’ ಎಂದು ಹೇಳಿದರು.

ಅಷ್ಟೇ ಅಲ್ಲ, ‘ಕುಡಿದು ವಾಹನ ಚಲಾಯಿಸಬೇಡಿ’ ಎಂಬ ಬೋರ್ಡ್​​ನ್ನು ಪಂಜಾಬ್​​ನ ರಸ್ತೆಗಳ ಪಕ್ಕ ಅನೇಕ ಕಡೆ ಹಾಕಿಡಲಾಗಿದೆ. ಆದರೆ ಈ ಭಗವಂತ್​ ಮಾನ್ ಮದ್ಯಪಾನ ಮಾಡಿ ಇಡೀ ರಾಜ್ಯವನ್ನು ಡ್ರೈವ್ ಮಾಡುತ್ತಿದ್ದಾರೆ. ಮಾನ್​ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ, ಅವರು ಕುಡಿತ ಬಿಡುವುದಾಗಿ ತಾಯಿ ಮೇಲೆ ಆಣೆ ಮಾಡಿದ್ದಾರೆ ಎಂದೆಲ್ಲ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ. ಅದೇನೋ ಮಹಾನ್​ ತ್ಯಾಗ ಎಂಬಂತೆ ಬಿಂಬಿಸಿದ್ದಾರೆ. ಕುಡಿತ ಬಿಡುವುದು ತ್ಯಾಗವೇ’ ಎಂದು ಹರ್ಸಿಮೃತ್​ ಕೌರ್ ಪ್ರಶ್ನಿಸಿದರು.

‘ಹಿಂದೊಮ್ಮೆ ಸಂಸತ್ತಿನ ಮೇಲೆ ದಾಳಿಯಾಗಿದ್ದು ಭಗವಂತ್ ಮಾನ್​ಗೆ ಗೊತ್ತಿತ್ತು. ಪಾರ್ಲಿಮೆಂಟ್ ಭದ್ರತಾ ನಿಯಮಗಳೂ ಗೊತ್ತಿದೆ. ಹಾಗಿದ್ದಾಗ್ಯೂ 2016ರಲ್ಲಿ ಅವರು ಇಡೀ ಸಂಸತ್ತಿನ ಮೂಲೆಮೂಲೆಯನ್ನು ವಿಡಿಯೊ ಮಾಡಿ ಲೈವ್​​ಸ್ಟ್ರೀಮ್​​ನಲ್ಲಿ ತೋರಿಸಿದ್ದರು. ಇಂಥವರನ್ನು ಅದು ಹೇಗೆ ಮುಖ್ಯಮಂತ್ರಿ ಮಾಡಿದರು ಎಂದೇ ಅರ್ಥವಾಗುತ್ತಿಲ್ಲ’ ಎಂದೂ ಕೌರ್​ ಹೇಳಿದ್ದಾರೆ. ಹೀಗೆ ಹರ್ಸಿಮೃತ್​ ಕೌರ್​ ಬಾದಲ್ ಅವರು ನಿರರ್ಗಳವಾಗಿ ಭಗವಂತ್​ ಮಾನ್​​ಗೆ ಬೈಯುತ್ತಿದ್ದರೆ, ಅಮಿತ್​ ಶಾ, ಓಂಬಿರ್ಲಾ ಮತ್ತು ಉಳಿದೆಲ್ಲ ಸಂಸದರೂ ಜೋರಾಗಿ ನಗುತ್ತಿದ್ದರು. ಪಂಜಾಬ್​​ ಸಂಸದರೊಬ್ಬರು ಪ್ರಾರಂಭದಲ್ಲಿ ಕೌರ್​ಗೆ ವಿರೋಧ ವ್ಯಕ್ತಪಡಿಸಲು ಮುಂದಾದರೂ, ಬಳಿಕ ಅವರು ಸುಮ್ಮನೇ ಕುಳಿತುಕೊಂಡರು.

ಈ ಹಿಂದೆ ಎಸ್​ಎಡಿ ಪಕ್ಷ ಎನ್​ಡಿಎ ಒಕ್ಕೂಟದಲ್ಲಿ ಇದ್ದಾಗ ಹರ್ಸಿಮೃತ್​ ಕೌರ್​ ಬಾದಲ್​ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಬಳಿಕ ಕೃಷಿ ಕಾಯ್ದೆ ವಿರೋಧಿಸಿ ಎಸ್​ಎಡಿ ಪಕ್ಷ ಬಿಜೆಪಿ ಒಕ್ಕೂಟದಿಂದ ಹೊರಬಿದ್ದಿದೆ. ಇವರು ಭಗವಂತ್​ ಮಾನ್​ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದು ಇದೇ ಮೊದಲೇನೂ ಅಲ್ಲ. ಹಿಂದೆಯೂ ಹಲವು ಬಾರಿ ಮಾನ್​​ರನ್ನು ಟೀಕಿಸಿದ್ದರು.

ಇದನ್ನೂ ಓದಿ: ಪಂಜಾಬ್​ ಪೊಲೀಸ್ ಠಾಣೆ ಮೇಲೆ ಗ್ರೆನೇಡ್​ ದಾಳಿ ಮಾಡಿದ್ದ 6 ಮಂದಿ ಬಂಧನ; ಯೂಟ್ಯೂಬ್​ ನೋಡಿ ದಾಳಿ ಮಾಡುವುದನ್ನು ಕಲಿತಿದ್ದರು!

Exit mobile version