Site icon Vistara News

ತಿಹಾರ ಜೈಲಿನ ಅತ್ಯಂತ ಹಿರಿಯ ಕೈದಿ ಎನ್ನಿಸಿಕೊಂಡ ಮಾಜಿ ಸಿಎಂ ಓಂ ಪ್ರಕಾಶ್‌ ಚೌಟಾಲಾ

Om Prakash Chautala

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಿಹಾರ ಜೈಲು ಸೇರಿರುವ ಹರ್ಯಾಣ ಮುಖ್ಯಮಂತ್ರಿ ಓಂ ಪ್ರಕಾಶ್‌ ಚೌಟಾಲಾ, ಇಡೀ ತಿಹಾರ ಜೈಲಿನಲ್ಲಿರುವವರಲ್ಲೇ ಅತ್ಯಂತ ಹಿರಿಯ ಕೈದಿ ಎನ್ನಿಸಿದ್ದಾರೆ. ಚೌಟಾಲಾ ಅವರಿಗೆ 87 ವರ್ಷ. ತಿಹಾರ್‌ ಕಾರಾಗೃಹದ ವಿವಿಧ ಸೆಲ್‌ಗಳಲ್ಲಿರುವ ಒಟ್ಟು ಇರುವ 19,584 ಕೈದಿಗಳಲ್ಲಿ ಚೌಟಾಲಾ ಅವರೇ ಹಿರಿಯರಾಗಿದ್ದಾರೆ. ಅಂದಹಾಗೇ, ಓಂ ಪ್ರಕಾಶ್‌ ಚೌಟಾಲಾರಿಗೆ ದೆಹಲಿಯ ವಿಶೇಷ ಕೋರ್ಟ್‌ ಒಟ್ಟು 4 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 50 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಚೌಟಾಲಾರನ್ನು ತಿಹಾರ ಜೈಲು ಸಂಖ್ಯೆ 2ರ ಸೆಲ್‌ನಲ್ಲಿ ಇರಿಸಲಾಗಿದೆ. ಅವರೊಂದಿಗೆ ಇನ್ನಿಬ್ಬರು ಕೈದಿಗಳು ಇದ್ದಾರೆ. ತಿಹಾರ್‌ ಜೈಲಿನಲ್ಲಿ 80 ವರ್ಷ ಮೇಲ್ಪಟ್ಟ ಒಟ್ಟು 7 ಮಂದಿ ಕೈದಿಗಳಿದ್ದಾರೆ. ಹಾಗೇ 70 ರಿಂದ 80 ವರ್ಷದವರೆಗಿನವರು 63 ಮಂದಿಯಿದ್ದಾರೆ. ಚೌಟಾಲಾ ಜೈಲಿಗೆ ಬರುವವರೆಗೂ 85 ವರ್ಷದ ವೃದ್ಧರೊಬ್ಬರು ತಿಹಾರ ಜೈಲಿನ ಅತ್ಯಂತ ಹಿರಿಯರು ಎನ್ನಿಸಿಕೊಂಡಿದ್ದರು.

ಇದನ್ನೂ ಓದಿ: ಕಪಿಲ್‌ ಸಿಬಲ್‌ ಕಾಂಗ್ರೆಸ್‌ ಬಿಟ್ರು, ಉಳಿದ ಜಿ-23 ನಾಯಕರು ಏನ್ಮಾಡ್ತಾರಂತೆ?

ಇಳಿವಯಸ್ಸಿನಲ್ಲಿ ಜೈಲು ಸೇರಿರುವ ಚೌಟಾಲಾಗೆ ಅವರ ವಯಸ್ಸಿನ ಕಾರಣದಿಂದ ಹಲವು ರಿಯಾಯಿತಿಗಳನ್ನು ನೀಡಲಾಗಿದೆ. ಉಳಿದ ಕೈದಿಗಳಂತೆ ಕೆಲಸ ಮಾಡಬೇಕಿಲ್ಲ. ಇನ್ನು 70 ವರ್ಷ ಮೇಲ್ಪಟ್ಟ ಎಲ್ಲ ಕೈದಿಗಳಿಗೂ ಬೆಡ್‌ ಕೊಡಲಾಗಿದ್ದು, ಅದರಂತೆ ಚೌಟಾಲಾಗೆ ಕೂಡ ಒಂದು ಬೆಡ್‌ ನೀಡಲಾಗಿದೆ. ಹಾಗೇ, ಇಳಿವಯಸ್ಸಿನ ಕೈದಿಗಳನ್ನು ನೋಡಿಕೊಳ್ಳಲು, ಅವರಿಗೆ ಅಗತ್ಯ ಸೇವೆ ಒದಗಿಸಲು ಕಿರಿಯ ಕೈದಿಗಳನ್ನು ನಿಯೋಜಿಸಲಾಗಿದೆ. ಈ ಕಿರಿಯರು ಯಾವುದೇ ಬೇಸರವಿಲ್ಲದೆ, ಹಿರಿಯರ ಕೆಲಸ ಮಾಡಿಕೊಡುತ್ತಿದ್ದಾರೆ. ಕೆಲವರು ತಾವೇ ಹಿರಿಯ ಕೈದಿಗಳನ್ನು ನೋಡಿಕೊಳ್ಳುವುದಾಗಿ ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ ಎಂದೂ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಿರಿಯ ಕೈದಿಗಳು ತಮ್ಮ ಜತೆಗಿರುವ ವಯಸ್ಸಾದ ಕೈದಿಗಳ ಬಟ್ಟೆ ಒಗೆಯುವುದು, ಅವರ ಪಾತ್ರೆಗಳನ್ನು ತೊಳೆದುಕೊಡುವುದು ಸೇರಿ ಹಲವು ಕೆಲಸಗಳನ್ನು ಮಾಡಿಕೊಡುತ್ತಾರೆ. ಅದರೊಂದಿಗೆ ಅವರ ಆರೋಗ್ಯದ ಬಗ್ಗೆಯೂ ಗಮನಹರಿಸುತ್ತಾರೆ. ಇನ್ನು ವೈದ್ಯರ ಸಲಹೆಯ ಮೇರೆ 70 ವರ್ಷ ಮೇಲ್ಪಟ್ಟ ಕೈದಿಗಳಿಗೆ ಆಹಾರ ಕ್ರಮದಲ್ಲಿ ಕೂಡ ವಿಶೇಷ ವಿನಾಯಿತಿ ಇರುತ್ತದೆ. ಹಾಲನ್ನು ಜಾಸ್ತಿ ಕೊಡಲಾಗುತ್ತದೆ ಎಂದೂ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಂದಹಾಗೇ, ಚೌಟಾಲಾ ಅವರು 1993-2006 ರ ಅವಧಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಿಬಿಐ ಕೂಡ ಪ್ರಕರಣ ದಾಖಲಿಸಿ, ತನಿಖೆ ನಡೆಸಿತ್ತು. ಅವರು ದೋಷಿಯೆಂದು ಸಾಬೀತಾದ ಹಿನ್ನೆಲೆಯಲ್ಲಿ 4 ವರ್ಷಗಳ ಶಿಕ್ಷೆ ಖಚಿತವಾಗಿದೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ದೆಹಲಿ ಮಾದರಿ: ರಾಜಧಾನಿಗೆ ಭೇಟಿ ನೀಡಿದ ಭಗವಂತ್‌ ಮನ್‌

Exit mobile version