ನವ ದೆಹಲಿ: 2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದ್ದ ದಲಿತ ಯುವತಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ (Hathras Case) ಆರೋಪಿಗಳಾಗಿ ಜೈಲು ಸೇರಿದ್ದ ಮೇಲ್ಜಾತಿಯ ನಾಲ್ವರಲ್ಲಿ, ಪ್ರಮುಖ ಆರೋಪಿ ಸಂದೀಪ್ ಸಿಸೋಡಿಯಾನೊಬ್ಬನನ್ನು ಅಪರಾಧಿ ಎಂದು ಪರಿಗಣಿಸಿರುವ ನ್ಯಾಯಾಲಯ, ಉಳಿದ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಅದರಲ್ಲಿ ಸಂದೀಪ್ಗೆ ಕೂಡ ಎಸ್ಸಿ/ಎಸ್ಟಿ ಕಾಯ್ದೆ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ದೌರ್ಜನ್ಯ ಮತ್ತು ದ್ವೇಷದ ಅಪರಾಧಗಳನ್ನು ತಡೆಗಟ್ಟಲು ಇರುವ ಕಾಯ್ದೆ)ಯಡಿ ಶಿಕ್ಷೆ ವಿಧಿಸಲಾಗಿದೆ ಹೊರತು ಅತ್ಯಾಚಾರಕ್ಕೆ ಸಂಬಂಧಪಟ್ಟ ಕೇಸ್ ಹಾಕಲಾಗಿಲ್ಲ. ಈ ಹತ್ರಾಸ್ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಈಗ ಮೂವರನ್ನು ಖುಲಾಸೆಗೊಳಿಸಿದೆ. ಒಬ್ಬನಿಗೆ ಶಿಕ್ಷೆ ನೀಡಿದ್ದು, ಅದರಲ್ಲೂ ರೇಪ್ ಕೇಸ್ ದಾಖಲಿಸದೆ ಇರುವುದು, ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಟೀಕೆಗೆ ಕಾರಣವಾಗಿದೆ. ಪ್ರತಿಪಕ್ಷಗಳು ಈ ವಿಷಯ ಇಟ್ಟುಕೊಂಡು ಹರಿಹಾಯುತ್ತಿವೆ. ಈ ಕೇಸ್ನಲ್ಲಿ ಖುಲಾಸೆಗೊಂಡವರ ಹೆಸರು ರವಿ, ರಾಮು ಮತ್ತು ಲವ್ಕುಶ್.
ಇದನ್ನೂ ಓದಿ: Prayagraj Encounter: ಉತ್ತರ ಪ್ರದೇಶದಲ್ಲಿ ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್ ಖಾನ್ ಎನ್‌ಕೌಂಟರ್
2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದ್ದ ಅತ್ಯಾಚಾರ ದೇಶಾದ್ಯಂತವಷ್ಟೇ ಅಲ್ಲ, ಜಾಗತಿಕವಾಗಿಯೂ ಸುದ್ದಿಯಾಗಿತ್ತು. 20ವರ್ಷದ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ, ಆಕೆಗೆ ಥಳಿಸಲಾಗಿತ್ತು. ಆಸ್ಪತ್ರೆ ಸೇರಿದ್ದ ಅವಳು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಈ ಕೇಸ್ನ್ನು ಅಲಹಾಬಾದ್ ಹೈಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಅದಾದ ಬಳಿಕ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. 2020ರ ಡಿಸೆಂಬರ್ನಲ್ಲಿ ಸಿಬಿಐ ಈ ನಾಲ್ವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು.