Site icon Vistara News

Heat Wave | ಉತ್ತರ ಭಾರತದಲ್ಲಿ 50 ಡಿಗ್ರಿ ಸನಿಹ ತಲುಪಿದ ಉಷ್ಣತೆ; ಜನರು ಹೈರಾಣ

Heat Wave

ನವದೆಹಲಿ: ಬಿಸಿಲ ಝಳ (Heat Wave) ತಾಪಕ್ಕೆ ಜನರು ಪರಿತಪಿಸುವಂತಾಗಿದೆ. ಇತ್ತ ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಐದು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದರೆ, ಅತ್ತ ದೆಹಲಿ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಉಷ್ಣತೆ ಗರಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಭಾನುವಾರ ದೆಹಲಿ ಉಷ್ಣತೆ 49 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಅದರಲ್ಲೂ ದೆಹಲಿ-ಹರಿಯಾಣ ಗಡಿಯಲ್ಲಿರುವ ಮಂಗೇಶ್‌ಪುರದಲ್ಲಿ ಅತ್ಯಂತ ಹೆಚ್ಚು ಅಂದರೆ 49.2 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಿದ್ದರೆ, ನಜಾಫ್‌ಗಢ್‌ನಲ್ಲಿ 49.1 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿ ಮಾತ್ರವಲ್ಲ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಇದೇ ಕಥೆ. ಉಷ್ಣ ಅಲೆಗೆ (Heat wave) ಜನರು ತತ್ತರಿಸುತ್ತಿದ್ದಾರೆ. ತುರ್ತು ಕೆಲಸ ಇಲ್ಲದ ಹೊರತು ಮನೆಯಿಂದ ಹೊರಹೋಗಬೇಡಿ, ಜಾಸ್ತಿ ಪ್ರಮಾಣದಲ್ಲಿ ನೀರು ಕುಡಿಯಿರಿ ಎಂದು ಉತ್ತರ ಭಾರತದ ಜನರಿಗೆ ಹವಾಮಾನ ಇಲಾಖೆ ತಜ್ಞರು ಸಲಹೆ ನೀಡಿದ್ದಾರೆ. ದೆಹಲಿಯ ಸಫ್ದರ್‌ಜಂಗ್‌ನಲ್ಲಿ 1944ರ ಮೇ 29ರಂದು 47.2 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಿತ್ತು. ಅದಾದ ಮೇಲೆ ಮೇ 15ರಂದು ದಾಖಲಾದ 45.6 ಡಿಗ್ರಿ ಸೆಲ್ಸಿಯಸ್‌ ಅತ್ಯಂತ ಹೆಚ್ಚಾಗಿದೆ. ದೆಹಲಿಯಲ್ಲಂತೂ ತಾಪಮಾನದ ಮಟ್ಟ ಪ್ರತಿದಿನವೂ 46-48ರ ಆಸುಪಾಸಿನಲ್ಲಿಯೇ ಇರುತ್ತಿದೆ. ಹರಿಯಾಣದ ಗುರುಗ್ರಾಮದಲ್ಲಿ ಇಂದು (ಮೇ 16) ಅತ್ಯಂತ ಹೆಚ್ಚು ಅಂದರೆ 48.1 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಿದೆ. ಪಂಜಾಬ್‌ನ ಮುಕ್ತ್ಸರ್‌ನಲ್ಲಿ 47.4ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಇದನ್ನೂ ಓದಿ: Early Mansoon: ಈ ಬಾರಿ ಒಂದು ವಾರ ಮೊದಲೇ ಮುಂಗಾರು ಪ್ರವೇಶ?

ಹವಾಮಾನದ ಬಗ್ಗೆ ಎಚ್ಚರಿಕೆ ನೀಡಲು ಸಾಮಾನ್ಯವಾಗಿ ಹವಾಮಾನ ಇಲಾಖೆ ನಾಲ್ಕು ಬಣ್ಣದ ಕೋಡ್‌ಗಳನ್ನು ಬಳಸುತ್ತದೆ. ಅದರಲ್ಲಿ ಹಸಿರು ಅಲರ್ಟ್‌ ಎಂದರೆ ಯಾವುದೇ ಎಚ್ಚರಿಕೆಯ ಅಗತ್ಯವಿಲ್ಲ ಎಂದು. ಹಳದಿ ಅಲರ್ಟ್‌ ಎಂದರೆ ಗಮನಿಸಲಾಗುತ್ತಿದೆ. ಶೀಘ್ರವೇ ಅಪ್‌ಡೇಟ್‌ ಕೊಡಲಾಗುವುದು ಎಂದು ಅರ್ಥ ಮಾಡಿಕೊಳ್ಳಬೇಕು. ಆರೆಂಜ್‌ ಅಲರ್ಟ್‌ ಕೊಟ್ಟರೆ, ಯಾವುದೇ ಸಮಯದಲ್ಲಿ ಅಪಾಯ ಎದುರಾಗಬಹುದು, ಸಿದ್ಧರಾಗಿರಿ ಎಂದು ಮತ್ತು ರೆಡ್‌ ಅಲರ್ಟ್‌ ಎಂದರೆ ಹವಾಮಾನದಲ್ಲಿ ಗಂಭೀರ ಬದಲಾವಣೆಯಾಗಿದ್ದು, ಎಚ್ಚರಿಕೆಯಿಂದ ಇರಬೇಕು ಎಂದಾಗಿದೆ. ಅದರಂತೆ ಸದ್ಯ ಉಷ್ಣಾಂಶ ಅತ್ಯಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ಐಎಂಡಿ ಆರೆಂಜ್‌ ಅಲರ್ಟ್‌ನ್ನು ಘೋಷಣೆ ಮಾಡಿದೆ.

ಈ ಮಧ್ಯೆ ಉಷ್ಣಾಂಶ ಅತ್ಯಧಿಕವಾಗಿರುವ ರಾಜ್ಯಗಳಾದ ದೆಹಲಿ, ಹರ್ಯಾಣ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್‌, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರಗಳಲ್ಲಿ ಮುಂದಿನ ವಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. ಇಂದು (ಮೇ 16) ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‌ಗಳಲ್ಲಿ ಮಿಂಚು, ಆಲಿಕಲ್ಲು ಮತ್ತು ಗಾಳಿ (ಗಂಟೆಗೆ 30/40 ಕಿಮೀ ವೇಗ) ಸಹಿತ ಮಳೆಯಾಗಬಹುದು ಎಂದು IMD ತಿಳಿಸಿದೆ. ಇಂದು ಪಂಜಾಬ್‌, ಹರ್ಯಾಣ, ಚಂಡಿಗಢ್‌, ದೆಹಲಿ, ಒಡಿಶಾ, ಪಶ್ಚಿಮ ಬಂಗಾಳ, ಅಂಡಮಾನ್‌ ನಿಕೋಬಾರ್‌ ದ್ವೀಪದಲ್ಲಿ ಅಲ್ಲಲ್ಲಿ ಮಿಂಚು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇರುವುದಾಗಿಯೂ ಮಾಹಿತಿ ನೀಡಿದೆ. ಹವಾಮಾನದಲ್ಲಿ ಬದಲಾವಣೆಯಾಗುತ್ತಿದ್ದು, ಜನರು ಆರೋಗ್ಯದ ಕಡೆ ಗಮನಕೊಡಬೇಕು ಎಂಬ ಎಚ್ಚರಿಕೆಯನ್ನೂ ನೀಡಿದೆ.

ಇದನ್ನೂ ಓದಿ : Cyclone Asani ದುರ್ಬಲವಾದರೂ ಮೂರ್ನಾಲ್ಕು ದಿನ ಭಾರೀ ಮಳೆ: ಉತ್ತಮ ಮುಂಗಾರಿನ ಮುನ್ಸೂಚನೆ

Exit mobile version