ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ಮಾಂಡೌಸ್ ಚಂಡಮಾರುತದ ಅಬ್ಬರ ಇಂದು ತುಸು ಕಡಿಮೆಯಾಗಿದೆ. ಮಾಂಡೌಸ್ ಚಂಡಮಾರುತ ಡಿ.9ರ ತಡರಾತ್ರಿ ಗಂಟೆಗೆ 75 ಕಿಮೀ ವೇಗದಲ್ಲಿ ತಮಿಳುನಡಿನ ಕರಾವಳಿ ಪ್ರವೇಶಿಸಿತ್ತು. ರಾಜ್ಯಾದ್ಯಂತ ಭಾರಿ ಪ್ರಮಾಣದ ಮಳೆ-ಗಾಳಿಗೆ ಭೂಕುಸಿತ ಉಂಟಾಗಿತ್ತು. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಲವು ಮನೆಗಳು ಕುಸಿದಿವೆ, 400ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಹಾಗೇ, ಚಂಡಮಾರುತ ಸಂಬಂಧಿ ಅವಘಡಕ್ಕೆ ನಾಲ್ವರು ಬಲಿಯಾಗಿದ್ದಾರೆ.
ಇಂದು ಮಾಂಡೌಸ್ ದುರ್ಬಲಗೊಂಡಿದ್ದರೂ ಆಂಧ್ರಪ್ರದೇಶದಲ್ಲಿ ವಿಪರೀತ ಮಳೆಗೆ ಕಾರಣವಾಗಿದೆ. ಇಲ್ಲಿ ಮಳೆ ಸಂಬಂಧಿ ಅವಘಡದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಗಾಳಿ-ಮಳೆ ಇರುವುದರಿಂದ ಅಪಾಯ ಹೆಚ್ಚಿರುವ ಪ್ರದೇಶಗಳ ಸುಮಾರು 1000 ಜನರನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಎಸ್ಪಿಎಸ್ಆರ್ ನೆಲ್ಲೂರ್ ಮತ್ತು ತಿರುಪತಿ ಜಿಲ್ಲೆಗಳಲ್ಲಿರುವ ಚಿಕ್ಕ ನದಿಗಳಾದ ಕಂದಲೇರು, ಮನೇರು ಮತ್ತು ಸ್ವರ್ಣಮುಖಿಗಳೆಲ್ಲ ತುಂಬಿ ಹರಿದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಲ್ಲೆಲ್ಲ ಕಟ್ಟೆಚ್ಚರ ವಹಿಸಲಾಗಿದೆ.
ಹಾಗೇ, ತಿರುಪತಿ ಜಿಲ್ಲೆಯ ಕೆವಿಬಿ ಪುರಮ್ ಮಂಡಲ್ನಲ್ಲಿ ಇಂದು 258 ಎಂಎಂ ದಾಖಲೆಯ ಮಳೆಯಾಗಿದೆ. ಅತಿಯಾದ ಮಳೆಯಿಂದ ಹೊಂಡಗಳು, ಕೊಳಗೆಲ್ಲ ತುಂಬಿ ಹರಿದು, ಕೆವಿಬಿ ಪುರಂ ಮಂಡಲ್ನಿಂದ ಶ್ರೀಕಾಲಹಸ್ತಿಗೆ ಹೋಗುವ ರಸ್ತೆ ಬ್ಲಾಕ್ ಆಗಿದೆ. ಆಂಧ್ರದ ದಕ್ಷಿಣ ಕರಾವಳಿ ತೀರದಲ್ಲಿ ವಸತಿ ಪ್ರದೇಶಗಳು, ಗಿಡಮರಗಳೆಲ್ಲ ಜಲಾವೃತಗೊಂಡಿದ್ದವು. ಅನೇಕ ಮರಗಳು ಧರೆಗೆ ಉರುಳಿವೆ. ಇನ್ನು ಮಾಂಡೌಸ್ ಮಳೆಯ ತೀವ್ರತೆ ತಿರುಮಲ ತಿರುಪತಿ ದೇಗುಲದ ಮೇಲೆ ಕೂಡ ಪ್ರಭಾವ ಬೀರಿದೆ. ದೇವಸ್ಥಾನದ ಆವರಣವೆಲ್ಲ ನೀರಿನಿಂದ ತುಂಬಿಹೋಗಿದ್ದು, ಭಕ್ತರಿಗೆ ತೊಂದರೆಯಾಗುತ್ತಿದೆ. ಇನ್ನು ಚಂಡಮಾರುತ ತಮಿಳುನಾಡಿನಿಂದ ದಾಟಿ ಹೋಗಿದ್ದರೂ, ಅಲ್ಲೂ ಸಹ ಮಳೆ ಮುಂದುವರಿದಿದೆ. ಕರ್ನಾಟಕದಲ್ಲೂ ನಿನ್ನೆಯಿಂದಲೂ ಒಂದೇ ಸಮ ಜಿಟಿಜಿಟಿ ಮಳೆ ಬೀಳುತ್ತಲೇ ಇದೆ.
ಇದನ್ನೂ ಓದಿ: Cyclone Mandous | ಚಂಡಮಾರುತ ಎಫೆಕ್ಟ್: ಮಲೆನಾಡಾದ ಬಿಸಿಲನಾಡು ಕೊಪ್ಪಳ, ವಿಜಯನಗರ: ಎಲ್ಲೆಡೆ ಶೀತಗಾಳಿ, ಮಳೆ