ನವ ದೆಹಲಿ: ದೇಶದಾದ್ಯಂತ ಭಾರಿ ಮಳೆಯಾಗುತ್ತಿದೆ. ಗುಜರಾತ್, ಮಹಾರಾಷ್ಟ್ರ, ತೆಲಂಗಾಣದಲ್ಲಿ ವಿಪರೀತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕರ್ನಾಟಕದಲ್ಲೂ ಕೂಡ ಇದೇ ಪರಿಸ್ಥಿತಿ ಕಳೆದ ಒಂದು ವಾರದಿಂದಲೂ ಮುಂದುವರಿದಿದೆ. ಗುಜರಾತ್‌ನ ದಕ್ಷಿಣ ಭಾಗದಲ್ಲಿ ವರುಣಾರ್ಭಟ ಹೆಚ್ಚಾಗಿದ್ದು ಅನೇಕ ಕಡೆ ನೀರು ನಿಂತಿದೆ. ಇಲ್ಲಿನ ವಲ್ಸಾಡ್ ಎಂಬಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ವಿಪರೀತ ಮಳೆಯಾಗಿದ್ದು, ಇದರಿಂದಾಗಿ ಔರಂಗಾ ನದಿ ಅಪಾಯ ಮಟ್ಟ ಮೀರಿ ಹರಿದಿದೆ. ತುಂಬಿದ ನದಿಯಿಂದಾಗಿ ಮನೆ-ಬೆಳೆಗಳೆಲ್ಲ ಜಲಾವೃತಗೊಂಡಿವೆ. ಅದರ ಡ್ರೋನ್ ಸರ್ವೇ ಫೋಟೋಗಳು ಕೂಡ ವೈರಲ್ ಆಗಿವೆ. ಇನ್ನೊಂದೆಡೆ ಅಹ್ವನಿ ನದಿ ಕೂಡ ತುಂಬಿ ಹರಿಯುತ್ತಿದ್ದು, ಅದಕ್ಕೆ ಹಾಕಲಾಗಿದ್ದ ಸೇತುವೆ ಕೊಚ್ಚಿಕೊಂಡು ಹೋಗಿದೆ.
ಗುಜರಾತ್‌ನ ನವಸಾರಿ ಮತ್ತು ವಲ್ಸಾಡ್ ಜಿಲ್ಲೆಗಳೇ ಅತ್ಯಂತ ಹೆಚ್ಚು ಮಳೆ-ಪ್ರವಾಹದಿಂದ ಬಾಧಿತಗೊಂಡಿದ್ದು, ಈ ಎರಡೂ ಜಿಲ್ಲೆಗಳಿಂದ 700 ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ನವಸಾರಿ ಜಿಲ್ಲೆಯಲ್ಲಿ ಕಾವೇರಿ ಮತ್ತು ಅಂಬಿಕಾ ನದಿಗಳೂ ಸಹ ಅಪಾಯಮಟ್ಟ ಮೀರಿದ್ದು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ತಿಳಿಸಿದೆ. ಹಾಗೇ, ಜನರ ಸುರಕ್ಷತೆಗಾಗಿ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ. ಛೋಟಾ ಉದೆಪುರ್‌ನಲ್ಲಿ ಕೂಡ ಸೇತುವೆಯೊಂದು ಕೊಚ್ಚಿ ಹೋಗಿದೆ.
ಮಹಾರಾಷ್ಟ್ರದಲ್ಲಿ 9ಮಂದಿ ಸಾವು
ಮಹಾರಾಷ್ಟ್ರದಲ್ಲಿ ಮಳೆ ಮಿತಿಮೀರಿ ಸುರಿಯುತ್ತಿದೆ. ಮಳೆ ಸಂಬಂಧಿತ ಅವಘಡಗಳಿಂದ ಕಳೆದ 24 ಗಂಟೆಯಲ್ಲಿ 9ಮಂದಿ ಮೃತಪಟ್ಟಿದ್ದಾರೆ. ಜೂ.1ರಿಂದ ಇಲ್ಲಿಯವರೆಗೆ ಮಳೆ ಸಂಬಂಧಿ ಅನಾಹುತದಿಂದ ಮೃತಪಟ್ಟವರು 76ಮಂದಿ. ಇನ್ನು 838 ಮನೆಗಳು ಧ್ವಂಸಗೊಂಡಿದ್ದು, 4916 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನು 125 ಪ್ರಾಣಿಗಳು ಜೀವ ಕಳೆದುಕೊಂಡಿವೆ. ಗಡ್‌ಚಿರೋಲಿ ಸೇರಿ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇನ್ನೂ ಮೂರ್ನಾಲ್ಕು ದಿನ ಮಹಾರಾಷ್ಟ್ರದಲ್ಲಿ ಇದೇ ಸ್ವರೂಪದ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ತೆಲಂಗಾಣದಲ್ಲಿ ಶಾಲೆಗಳಿಗೆ ರಜೆ
ತೆಲಂಗಾಣದಲ್ಲೂ ಕೂಡ ವರುಣ ಆರ್ಭಟಿಸುತ್ತಿದ್ದಾನೆ. ಇಂದು ಭೂಪಾಲಪಲ್ಲಿ ಜಿಲ್ಲೆಯ ಜಯಶಂಕರ್‌ನಲ್ಲಿರುವ ಕಲೇಶ್ವರಮ್‌ನಲ್ಲಿ ಅತ್ಯಂತ ಹೆಚ್ಚು ಅಂದರೆ 35 ಸಿಎಂ ಮಳೆಯಾಗಿದೆ. ಹಾಗೇ, ಮಂಚೇರಿಯಲ್ ಜಿಲ್ಲೆಯ ಕೊಟಾಪಲ್ಲೆಯಲ್ಲಿ 25 ಸಿಎಂ ಮತ್ತು ನಿಜಾಮಾಬಾದ್‌ನ ನವಿಪೇಟ್‌ನಲ್ಲಿ 24 ಸಿಎಂ ಮಳೆ ಬಿದ್ದಿದೆ. ಅಡಿಲಾಬಾದ್, ಕೋಮಾರಮ್ ಭೀಮ್, ಅಸಿಫಾಬಾದ್, ಮಂಚೇರಿಯಲ್, ನಿರ್ಮಲ್, ನಿಜಾಮಾಬಾದ್, ಜಗಿತ್ಯಾಲ್, ಪೆಡ್ಡಾಪಲ್ಲಿ, ಭೂಪಾಲ್‌ಪಲ್ಲಿಗಳಲ್ಲಿ ಜು.11ರವರೆಗೂ ಅತ್ಯಧಿಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಮಧ್ಯೆ ತೆಲಂಗಾಣದಲ್ಲಿ ಶಾಲಾ-ಕಾಲೇಜುಗಳಿಗೆ ಜುಲೈ 11ರಿಂದ ಮೂರು ದಿನಗಳ ಕಾಲ ರಜೆ ನೀಡಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆದೇಶ ನೀಡಿದ್ದಾರೆ. ಇಂದು ಅವರು ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ, ಮಳೆಯ ವರದಿ ಪಡೆದಿದ್ದರು. ನಂತರ ಮೂರು ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Weather report | ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ನಿರೀಕ್ಷೆ