ಚೆನ್ನೈ: ಬಂಗಾಳ ಕೊಲ್ಲಿಯಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಡಿಸೆಂಬರ್ 8ರಂದು ತಮಿಳುನಾಡು, ಪುದುಚೇರಿ ಕರಾವಳಿ ಮತ್ತು ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಗೆ ಮಾಂಡೌಸ್ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಬಂಗಾಳಕೊಲ್ಲಿ ಆಗ್ನೇಯ ಭಾಗದ ಕೇಂದ್ರದಲ್ಲಿ ಡಿಸೆಂಬರ್ 5ರಂದು ವಾಯುಭಾರ ಕುಸಿತವಾಗಿದ್ದು, ತತ್ಪರಿಣಾಮವಾಗಿ ಎದ್ದಿರುವ ಗಾಳಿ ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತಿತ್ತು. ಡಿಸೆಂಬರ್ 6ರಂದು ತೀವ್ರ ಸ್ವರೂಪದ ಮಾರುತ ಚೆನ್ನೈನಿಂದ 900 ಕಿಮೀ ದೂರದಲ್ಲಿ ಮತ್ತು ಕಾರೈಕಲ್ನಿಂದ 840 ಕಿಮೀ ದೂರದಲ್ಲಿತ್ತು. ಅದು ಡಿ.8ರ ಹೊತ್ತಿಗೆ ಚಂಡಮಾರುತವಾಗಿ ರೂಪುಗೊಂಡು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಾಂಡೌಸ್ ಚಂಡಮಾರುತದ ಪರಿಣಾಮದಿಂದ ತಮಿಳುನಾಡು, ಪುದುಚೇರಿ ಕಾರೈಕಲ್ ಮತ್ತು ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹಾಗೇ, ಚಂಡಮಾರುತ ಅಬ್ಬರದಿಂದ ಉಂಟಾಗಬಹುದಾದ ಯಾವುದೇ ಅವಘಡ, ಹಾನಿಯ ವಿರುದ್ಧ ಹೋರಾಡಲು ಎನ್ಡಿಆರ್ಎಫ್, ಭೂಸೇನೆ, ನೌಕಾಪಡೆಗಳ ಸಿಬ್ಬಂದಿಯನ್ನು ಕರಾವಳಿ ತೀರದಲ್ಲಿ ನಿಯೋಜಿಸಲಾಗಿದೆ. ಕರಾವಳಿ ಸಮೀಪದಲ್ಲಿಯೇ ಮನೆ ಮಾಡಿಕೊಂಡು ವಾಸವಾಗಿರುವ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಿರಲು ಸೂಚನೆ ನೀಡಲಾಗಿದೆ.
ಇನ್ನು ಡಿಸೆಂಬರ್ 8ರಂದು ತಮಿಳುನಾಡಿನ ಒಟ್ಟು 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನಾಗಾಪಟ್ಟಿಣಂ, ತಂಜಾವೂರು, ಕಡಲೋರ್, ಮೈಲಾಡುತುರೈ ಮತ್ತು ಚೆನ್ನೈಗಳಲ್ಲಿ ಎನ್ಡಿಆರ್ಎಫ್ನ 6 ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಪುದುಚೇರಿ ಮತ್ತು ಕಾರೈಕಲ್ನಲ್ಲಿ ಎನ್ಡಿಆರ್ಎಫ್ನ ಮೂರು ತಂಡಗಳು ಸಜ್ಜಾಗಿ ನಿಂತಿವೆ.
ತಮಿಳುನಾಡು, ಪುದುಚೇರಿ, ಕಾರೈಕಲ್, ಆಂಧ್ರಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಕಂಟ್ರೋಲ್ ರೂಮ್ಗಳನ್ನೂ ರಚಿಸಲಾಗಿದೆ. ತಮಿಳುನಾಡು, ಪುದುಚೇರಿ, ಕಾರೈಕಲ್ಗಳಲ್ಲೆಲ್ಲ ಈಗಾಗಲೇ ಎನ್ಡಿಆರ್ಎಫ್ ಸಿಬ್ಬಂದಿ ನಿಯೋಜನೆ ಗೊಂಡಿದ್ದು, ಆಂಧ್ರಪ್ರದೇಶದಲ್ಲಿ ರಕ್ಷಣಾ ಸಿಬ್ಬಂದಿ ಸಿದ್ಧರಾಗಿದ್ದು, ರಾಜ್ಯ ಸರ್ಕಾರದಿಂದ ಸೂಚನೆ ಬಂದ ತಕ್ಷಣ ನಿಯೋಜನೆಗೊಳ್ಳಲಿದ್ದಾರೆ.
ಕರ್ನಾಟಕದಲ್ಲೂ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡಿಗೆ ಚಂಡಮಾರುತ ಅಪ್ಪಳಿಸುವ ಕಾರಣ ಕರ್ನಾಟಕದಲ್ಲೂ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮತ್ತು ಬೆಂಗಳೂರು, ಕೋಲಾರ, ಕೊಡಗು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಡಿ.8ರಿಂದ 10ರವರೆಗೂ ಭಾರಿ ಮಳೆಯಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Cyclone Sitrang | ಬಾಂಗ್ಲಾದೇಶದಲ್ಲಿ ಸಿಟ್ರಾಂಗ್ ಚಂಡಮಾರುತದ ಅಬ್ಬರ, 9 ಜನ ಸಾವು; ಪಶ್ಚಿಮ ಬಂಗಾಳದಲ್ಲೂ ಗಾಳಿ ಜೋರು