ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಪ್ರೀಂಕೋರ್ಟ್ ಎಂಬುದು ಅಂತಿಮ. ಅಲ್ಲಿಂದ ತೀರ್ಪು ಬಂದರೆ ಅದನ್ನು ಪ್ರಶ್ನಿಸುವಂತಿಲ್ಲ. ಹೀಗೆ ಸರ್ವೋಚ್ಛ ನ್ಯಾಯಾಲಯದ ಒಂದು ಸ್ಥರ ಕೆಳಗೆ ಇರುವುದೇ ಹೈಕೋರ್ಟ್ಗಳು. ಕರ್ನಾಟಕ, ಮದ್ರಾಸ್, ಬಾಂಬೆ, ಕೋಲ್ಕತ್ತ, ಪಾಟ್ನಾ, ಪಂಜಾಬ್ ಆ್ಯಂಡ್ ಹರ್ಯಾಣ, ದೆಹಲಿ, ಗುಜರಾತ್, ರಾಜಸ್ಥಾನ, ಅಲಹಾಬಾದ್, ಉತ್ತರಾಖಂಡ್, ಮಣಿಪುರ, ಮೇಘಾಲಯ, ಒರಿಸ್ಸಾ, ಸಿಕ್ಕಿಂ, ತೆಲಂಗಾಣ, ಕೇರಳ, ತ್ರಿಪುರ, ಮಧ್ಯಪ್ರದೇಶ, ಜಾರ್ಖಂಡ, ಹಿಮಾಚಲ ಪ್ರದೇಶ, ಗುವಾಹಟಿ, ಛತ್ತೀಸ್ಗಢ್, ಜಮ್ಮು-ಕಾಶ್ಮೀರ್ ಆ್ಯಂಡ್ ಲಡಾಕ್ ಹೈಕೋರ್ಟ್ಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಇರುವ ಇಷ್ಟೆಲ್ಲ ಹೈಕೋರ್ಟ್ಗಳಲ್ಲಿ ಅತ್ಯಂತ ಹಳೆಯ ಹೈಕೋರ್ಟ್ ಯಾವುದು? ಹೀಗೊಂದು ಕುತೂಹಲ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ದೇಶದಲ್ಲಿ ಈಗಿರುವ ಹೈಕೋರ್ಟ್ಗಳಲ್ಲಿ ಕೋಲ್ಕತ್ತ ಹೈಕೋರ್ಟ್ ಅತ್ಯಂತ ಹಳೆಯದು. ಪಶ್ಚಿಮ ಬಂಗಾಳ ಮತ್ತು ಅಂಡಮಾನ್-ನಿಕೋಬಾರ್ ಕೇಂದ್ರಾಡಳಿತ ಪ್ರದೇಶಗಳ ನ್ಯಾಯನಿರ್ಣಯ ವ್ಯಾಪ್ತಿಯನ್ನು ಹೊಂದಿರುವ ಕೋಲ್ಕತ್ತ (ಕಲ್ಕತ್ತಾ) ಹೈಕೋರ್ಟ್ ಸ್ಥಾಪಿತವಾಗಿದ್ದು 1862ರ ಜುಲೈ 2ರಂದು. ಬ್ರಿಟಿಷರ ಕಾಲದಲ್ಲಿ ಮೂರು ಪ್ರೆಸಿಡೆನ್ಸಿ ಪಟ್ಟಣಗಳು (ಬ್ರಿಟಿಷ್ ಅಧಿಪತ್ಯವಿದ್ದ ಮೂರು ಪ್ರಮುಖ ನಗರಗಳು) ಎನ್ನಿಸಿದ್ದ ಬಾಂಬೆ, ಕಲ್ಕತ್ತಾ ಮತ್ತು ಮದ್ರಾಸ್ಗಳಲ್ಲಿ ಹೈಕೋರ್ಟ್ಗಳನ್ನು ಸ್ಥಾಪಿಸಲು ಕ್ವೀನ್ ವಿಕ್ಟೋರಿಯಾ ಹಕ್ಕುಪತ್ರ ನೀಡಿದ ಬಳಿಕ ಮೊಟ್ಟಮೊದಲನೇದಾಗಿ 1862ರ ಜುಲೈ 2ರಲ್ಲಿ ಕಲ್ಕತ್ತಾ ಹೈಕೋರ್ಟ್ ನಿರ್ಮಿತಗೊಂಡಿತು. ಬಳಿಕ ಅದೇ ವರ್ಷ ಆಗಸ್ಟ್ 14ರಂದು ಬಾಂಬೆ ಹೈಕೋರ್ಟ್ ಮತ್ತು ಆಗಸ್ಟ್ 15ರಂದು ಮದ್ರಾಸ್ ಹೈಕೋರ್ಟ್ ಸ್ಥಾಪಿತಗೊಂಡವು.
ಕಲ್ಕತ್ತ ಹೈಕೋರ್ಟ್ನ ನ್ಯಾಯನಿರ್ಣಯ ವ್ಯಾಪ್ತಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂದನಗರ್ಗಳು ಸೇರ್ಪಡೆಯಾಗಿದ್ದು 1950ರ ಮೇ 2ರಂದು. ಬ್ರಿಟಿಷ್ ಕಾಲದ ನಂತರ ಹಂತಹಂತವಾಗಿ ಬದಲಾವಣೆಯಾಗುತ್ತ ಬಂದ ಈ ಹೈಕೋರ್ಟ್ನಲ್ಲಿ ಸುಮಾರು 72 ನ್ಯಾಯಾಧೀಶರು ಇದ್ದಾರೆ. 1862ರಲ್ಲಿ ಹೈಕೋರ್ಟ್ ಸ್ಥಾಪನೆಯಾದಾಗ ಮೊಟ್ಟಮೊದಲು ಅದರ ಮುಖ್ಯನ್ಯಾಯಮೂರ್ತಿಯಾಗಿದ್ದು ಬಾರ್ನ್ಸ್ ಪೀಕಾಕ್. ಬ್ರಿಟಿಷ್ ವಸಾಹತುಶಾಹಿ ಕೊನೆಗೊಂಡ ಬಳಿಕ ಕೋಲ್ಕತ್ತ ಹೈಕೋರ್ಟ್ಗೆ ನೇಮಕಗೊಂಡ ಭಾರತದ ಮೊಟ್ಟಮೊದಲ ನ್ಯಾಯಮೂರ್ತಿ ರೋಮೇಶ್ ಚಂದ್ರ ಮಿಟ್ಟರ್. ಹಾಗೇ, ಈ ಕೋರ್ಟ್ಗೆ ಮೊಟ್ಟಮೊದಲ ಕಾಯಂ ಮುಖ್ಯ ನ್ಯಾಯಮೂರ್ತಿಯಾದವರು ಫಣಿ ಭೂಷಣ ಚಕ್ರವರ್ತಿ ಮತ್ತು ಇಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಮುಖ್ಯ ನ್ಯಾಯಮೂರ್ತಿ ಶಂಕರ್ ಪ್ರಸಾದ್ ಮಿತ್ರಾ.
ವಿನ್ಯಾಸ ಮಾಡಿದ್ಯಾರು?
ಕೋಲ್ಕತ್ತ ಹೈಕೋರ್ಟ್ ನಿರ್ಮಾಣದ ಸಂದರ್ಭದಲ್ಲಿ ಅದನ್ನು ವಿನ್ಯಾಸ ಮಾಡಿದ್ದು, ಬ್ರಿಟಿಷ್ ಸರ್ಕಾರದ ವಾಸ್ತು ಶಿಲ್ಪಿ ವಾಲ್ಟರ್ ಗ್ರಾನ್ವಿಲ್ಲೆ. ಬೆಲ್ಜಿಯಂನ ಯಪ್ರೆಸ್ನಲ್ಲಿರುವ ಅತಿದೊಡ್ಡ ವಾಣಿಜ್ಯಿಕ ಕಟ್ಟಡ ಕ್ಲಾಥ್ ಹಾಲ್ ಮಾದರಿಯಲ್ಲೇ ಈ ಕೋರ್ಟ್ ಕೂಡ ವಿನ್ಯಾಸಗೊಂಡಿದೆ. 1862ರಲ್ಲಿಯೇ ಹೈಕೋರ್ಟ್ ಸ್ಥಾಪಿತಗೊಂಡರೂ ಅದರ ಸುಸಜ್ಜಿತ ಕಟ್ಟಡ ಪೂರ್ತಿಯಾಗಿದ್ದು 10ವರ್ಷಗಳ ಬಳಿಕ. ಅಂದರೆ 1972ರಲ್ಲಿ..!
ಕೋಲ್ಕತ್ತವೋ, ಕಲ್ಕತ್ತನೋ?
ಮೊದಲ ಕಲ್ಕತ್ತಾ (Calcutta) ಎಂದು ಕರೆಯಲ್ಪಡುತ್ತಿದ್ದ ನಗರ 2001ರಲ್ಲಿ ಕೋಲ್ಕತ್ತ (Kolkata) ಎಂದು ಬದಲಾಗಿದೆ. ಕಲ್ಕತ್ತಾ ಹೈಕೋರ್ಟ್ನ್ನು ಕೋಲ್ಕತ್ತ ಹೈಕೋರ್ಟ್ ಎಂದು ಬದಲಿಸುವ ಮಸೂದೆಯನ್ನು 2016ರ ಜುಲೈ 5ರಂದು ಕೇಂದ್ರ ಸರ್ಕಾರ ಅಂಗೀಕಾರ ಮಾಡಿಯೂ ಆಗಿದೆ. ಜನಸಾಮಾನ್ಯರ ಬಾಯಲ್ಲಿ ಕೂಡ ಈಗೀಗ ಕೋಲ್ಕತ್ತ ಹೈಕೋರ್ಟ್ ಎಂದೇ ಕರೆಯಲ್ಪಡುತ್ತಿದೆ. ಹಾಗಿದ್ದಾಗ್ಯೂ ಆ ಹೈಕೋರ್ಟ್ ತನ್ನ ಎಲ್ಲ ಕಾರ್ಯ, ಬರವಣಿಗೆಯಲ್ಲೂ ಕಲ್ಕತ್ತಾ ಹೈಕೋರ್ಟ್ ಎಂದೇ ಉಲ್ಲೇಖಿಸುತ್ತಿದೆ.
ಇದನ್ನೂ ಓದಿ: ಬಿರ್‌ಭೂಮ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ