Site icon Vistara News

ದೆಹಲಿಯಲ್ಲಿ ಲ್ಯಾಂಡ್​​ ಆಗಲಿರುವ ವಿಮಾನದಲ್ಲಿ ಬಾಂಬ್​ ಇದೆಯೆಂಬ ಕರೆ; ಮಧ್ಯರಾತ್ರಿ ಭದ್ರತೆ ಹೆಚ್ಚಳ

airport

ನವ ದೆಹಲಿ: ರಷ್ಯಾದ ಮಾಸ್ಕೋದಿಂದ ದೆಹಲಿಗೆ ಹೊರಟಿದ್ದ ವಿಮಾನವೊಂದರಲ್ಲಿ ಬಾಂಬ್​ ಇದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಇ-ಮೇಲ್​ ಬಂದಿದ್ದರಿಂದ ಅಲ್ಲೀಗ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. 386 ಪ್ರಯಾಣಿಕರು, 16 ಸಿಬ್ಬಂದಿ ಇದ್ದ ಎಸ್​​ಯು 232 ನಂಬರ್​ನ ವಿಮಾನದಲ್ಲಿ ಬಾಂಬ್​ ಇದೆ ಎಂದು ಹೇಳಲಾಗಿತ್ತು. ಇದು ದೆಹಲಿ ಏರ್​ಪೋರ್ಟ್​​ನಲ್ಲಿ ಶುಕ್ರವಾರ (ಇಂದು) ಮುಂಜಾನೆ 3.20ರ ಹೊತ್ತಿಗೆ ಲ್ಯಾಂಡ್ ಆಗಿದೆ. ಇಡೀ ವಿಮಾನವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದ್ದು, ಬಾಂಬ್​ ಕಂಡುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಮಾಸ್ಕೋದಿಂದ ಈ ವಿಮಾನ ಹೊರಟ ಬಳಿಕ ಸುಮಾರು ಗುರುವಾರ ತಡರಾತ್ರಿ 1.28ರ ಹೊತ್ತಿಗೆ ದೆಹಲಿ ತುರ್ತು ಪ್ರತಿಕ್ರಿಯಾ ಸೇವೆ (Delhi Emergency response services)ಗೆ ಒಂದು ಇ-ಮೇಲ್​ ಬಂದಿತ್ತು. ತತ್​ಕ್ಷಣವೇ ಏರ್​ಪೋರ್ಟ್​​ನಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಬಾಂಬ್​ ಸ್ಕ್ವಾಡ್​, ಪೊಲೀಸ್​ ತಂಡಗಳು ಸಜ್ಜಾಗಿ ನಿಂತಿದ್ದವು. ಹಾಗೇ, 3.20ರ ಹೊತ್ತಿಗೆ ವಿಮಾನ ಲ್ಯಾಂಡ್​ ಕೂಡ ಆಯಿತು. ಏನೂ ಅಪಾಯವಾಗದಂತೆ, ಪ್ರಯಾಣಿಕರು ಗಾಬರಿಯಾಗದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಿದ ಬಳಿಕ ಇಡೀ ವಿಮಾನ ಜಾಲಾಡಿದರೂ ಯಾವುದೇ ಸ್ಫೋಟಕವೂ ಪತ್ತೆಯಾಗಿಲ್ಲ. ಆದರೂ ಸದ್ಯ ಆ ಏರ್​ಕ್ರಾಫ್ಟ್​​ನ್ನು ಒಂದು ಬದಿಗೆ ಇಡಲಾಗಿದೆ. ಇದೊಂದು ಫೇಕ್​ ಬಾಂಬ್​ ಬೆದರಿಕೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬಾಂಬ್​ ಹುಸಿಕರೆಯೇ ಆದರೂ ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆ ಸ್ವಲ್ಪ ವಿಳಂಬವಾಯಿತು ಎಂದೂ ವರದಿಯಾಗಿದೆ.

ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ಗೆ ಬಾಂಬ್‌ ಬೆದರಿಕೆ, ಭದ್ರತೆ ಹೆಚ್ಚಳ, ವಾಟ್ಸ್‌ ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದವನಿಗೆ ಶೋಧ

Exit mobile version