ನವ ದೆಹಲಿ: ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿಟಿ ಪ್ರದೇಶಗಳಲ್ಲಿ ಹಠಾತ್ ಪ್ರವಾಹ(Flash Floods)ದಿಂದ ತೀವ್ರ ತೊಂದರೆಯಾಗಿದೆ. ಈ ಪರಿಸ್ಥಿತಿಯಿಂದಾಗಿ ಅನೇಕ ಪ್ರವಾಸಿಗರು ಕಷ್ಟಪಡುವಂತಾಗಿದೆ. ಪ್ರವಾಹ ಪೀಡಿತ ಸ್ಥಳದಲ್ಲಿ ಸಿಲುಕಿದ್ದ 105 ಮಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದ್ದು, ಇನ್ನೂ 150 ಜನರು ಅಲ್ಲಿಯೇ ಇದ್ದಾರೆ. ಲಹೌಲ್ ಉಪವಿಭಾಗದ ಸುಮ್ಡೋ-ಕಾಜಾ-ಗ್ರಾಂಫೂ (ಎಸ್‌ಕೆಜಿ) ರಸ್ತೆ ಸಂಚಾರ ಕಡಿತಗೊಂಡಿದೆ. ಹೀಗಾಗಿ ಚಟ್ರು ಮತ್ತು ದೋರ್ನಿ ಮೋರ್ಹ್ ಪ್ರದೇಶದಲ್ಲಿದ್ದ ಪ್ರವಾಸಿಗರು, ಸ್ಥಳೀಯರು ಅಲ್ಲಿಂದ ಹೊರ ಬರಲಾಗದೆ ಚಡಪಡಿಸುತ್ತಿದ್ದಾರೆ. ಲಾಹೌಲ್-ಸ್ಪಿಟಿ ಜಿಲ್ಲಾ ತುರ್ತು ಕಾರ್ಯಾಚರಣೆಗಳ ಕೇಂದ್ರ (DEOC)ದ ರಕ್ಷಣಾ ತಂಡ, ಪೊಲೀಸ್, ಗಡಿ ರಸ್ತೆ ಸಂಸ್ಥೆಗಳ ಸಿಬ್ಬಂದಿ ಸೇರಿ ಜನರನ್ನು ಅಲ್ಲಿಂದ ಕರೆತರುವ ಕೆಲಸ ಮಾಡುತ್ತಿದ್ದಾರೆ.
ಭಾನುವಾರ ರಾತ್ರಿ ವಿಪರೀತ ಸುರಿದ ಮಳೆಯಿಂದಾಗಿ ದೋರ್ನಿ ನದಿ ಅಪಾಯಮಟ್ಟ ಮೀರಿ ಹರಿದಿದೆ. ಇದರಿಂದಾಗಿ ಲಾಹುಲಾಲ್ ಮತ್ತು ಸ್ಪಿಟಿ ಜಿಲ್ಲೆಗಳ ಒಟ್ಟು ನಾಲ್ಕು ಪ್ರದೇಶಗಳು ಜಲಾವೃತಗೊಂಡಿದ್ದವು. ಒಂಭತ್ತು ರಸ್ತೆಗಳ ಸಂಚಾರ ಕಡಿತಗೊಂಡಿದೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ. ಇಲ್ಲಿ ಸಿಲುಕಿರುವವರನ್ನು ಮೂರು ಟ್ರಕ್‌ಗಳ ಮೂಲಕ ಬೇರೆಡೆಗೆ ಸಾಗಿಸಲಾಗುತ್ತಿದೆ ಎಂದೂ ತಿಳಿಸಿದೆ. ರಾಜ್ಯ ಸಚಿವ ರಾಮ್ ಲಾಲ್ ಮರ್ಕಂದಾ ಕೂಡ ಮಿಯಾರ್ ಕಣಿವೆಯಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘ ಸ್ಫೋಟ, ಪಾರ್ವತಿ ನದಿಯಲ್ಲಿ ಹಠಾತ್ ಪ್ರವಾಹ, ನಾಲ್ವರ ಸಾವು