ಹಿಮಾಚಲ ಪ್ರದೇಶದಲ್ಲಿ ಇಂದು ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, 68 ವಿಧಾನಸಭೆ ಕ್ಷೇತ್ರಗಳಲ್ಲಿ ಬೆಳಗ್ಗೆ 8ಗಂಟೆಯಿಂದ ಮತದಾನ ನಡೆಯಲಿದೆ. ಈ 68 ಕ್ಷೇತ್ರಗಳಿಂದ ಒಟ್ಟು 412 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಇಂದು ಮುಂಜಾನೆಯೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ಇಂದು ಹಿಮಾಚಲ ಪ್ರದೇಶದಲ್ಲಿ ಮತದಾನ ನಡೆಯಲಿದೆ. ಈ ದೇವಭೂಮಿಯಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲ ಮತದಾರರೂ ಉತ್ಸಾಹದಿಂದ ಭಾಗವಹಿಸಿ, ಪೂರ್ಣ ಮತದಾನ ಮಾಡಬೇಕು. ಈ ಮೂಲಕ ಹೊಸ ದಾಖಲೆಯನ್ನು ಬರೆಯಬೇಕು ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ. ಅದರಲ್ಲೂ ಈ ಸಲ ಪ್ರಥಮ ಬಾರಿಗೆ ಮತ ಚಲಾಯಿಸಿದ ಯುವಜನತೆಗೆ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ.
ಹಿಮಾಚಲ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಅವರ ಪತ್ನಿ ಸಾಧನಾ ಠಾಕೂರ್, ಪುತ್ರಿಯರಾದ ಚಂದ್ರಿಕಾ ಮತ್ತು ಪ್ರಿಯಾಂಕಾ ಅವರು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ಅದಕ್ಕೂ ಮುನ್ನ ಇಡೀ ಕುಟುಂಬ ಮಂಡಿಯಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ. ಬೆಳಗ್ಗೆಯಿಂದಲೇ ಮತದಾನಕ್ಕೆ ಗಮನಾರ್ಹ ಸಂಖ್ಯೆಯಲ್ಲಿ ಜನರು ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ.
ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ಗೆ ಆಮ್ ಆದ್ಮಿ ಪಕ್ಷವೂ ಸ್ಪರ್ಧೆಯೊಡ್ಡುತ್ತಿದೆ. ದೇಶಾದ್ಯಂತ ರಾಜಸ್ಥಾನ, ಛತ್ತೀಸ್ಗಢ್ ಹೊರತುಪಡಿಸಿದರೆ ಉಳಿದೆಲ್ಲ ಕಡೆ ಬಹುತೇಕ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ ಹೇಗಾದರೂ ಹಿಮಾಚಲ ಪ್ರದೇಶದಲ್ಲಿ ಗೆಲ್ಲಬೇಕು ಎಂಬ ತವಕದಲ್ಲಿದೆ. ಆದರೆ ಕಳೆದ ಮೂರು ದಿನಗಳ ಹಿಂದೆ ಕಾಂಗ್ರೆಸ್ನ 20ಕ್ಕೂ ಹೆಚ್ಚು ಪ್ರಮುಖರು ಬಿಜೆಪಿ ಸೇರ್ಪಡೆಯಾಗಿದ್ದು ಆ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಮತದಾನ ಪ್ರಾರಂಭವಾಗುತ್ತಿದ್ದಂತೆ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ‘ಹಿಮಾಚಲ ಪ್ರದೇಶದ ಆತ್ಮೀಯರೇ, ನಿಮಗೆಲ್ಲರಿಗೂ ನಿಮ್ಮ ರಾಜ್ಯದ ಪರಿಸ್ಥಿತಿ ಗೊತ್ತು. ನಿಮ್ಮ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಬುದ್ಧಿವಂತಿಕೆಯಿಂದ ಮತದಾನ ಮಾಡಿ. ಇಲ್ಲಿನ ಸನ್ನಿವೇಶ ಬದಲಿಸುವಲ್ಲಿ ಮತ್ತು ಹಿಮಾಚಲ ಪ್ರದೇಶದ ಭವಿಷ್ಯವನ್ನು ಕಟ್ಟುವಲ್ಲಿ ನಿಮ್ಮ ಮತದ ಕೊಡುಗೆ ಅತ್ಯಂತ್ಯ ಮಹತ್ವದ್ದು’ ಎಂದು ಹೇಳಿದ್ದಾರೆ.
2017ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. 68 ವಿಧಾನಸಭಾ ಕ್ಷೇತ್ರದಲ್ಲಿ 44 ಕ್ಷೇತ್ರದ ಬಿಜೆಪಿಗೆ ಒಲಿದಿತ್ತು. ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಸಲ ಕೂಡ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇಲ್ಲಿಗೆ ಎರಡು ಬಾರಿ ಭೇಟಿಕೊಟ್ಟಿದ್ದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅನುರಾಗ್ ಠಾಕೂರ್ ಕೂಡ ಇಲ್ಲಿಗೆ ಪ್ರಚಾರಕ್ಕೆ ಆಗಮಿಸಿದ್ದರು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯೂಸಿ ಇದ್ದು, ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಒಮ್ಮೆಯೂ ಪ್ರಚಾರ ನಡೆಸಿಲ್ಲ. ಅರವಿಂದ್ ಕೇಜ್ರಿವಾಲ್ ಕೂಡ ಇಲ್ಲಿಗೆ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ನಡೆಸಿದ್ದಾರೆ.
ಇದನ್ನೂ ಓದಿ: ವಿಸ್ತಾರ ವಿಶೇಷ | ಹಿಮಾಚಲ ಪ್ರದೇಶದಲ್ಲಿ ಇಂದು ಮತದಾನ, ಬಿಜೆಪಿ ಭದ್ರಕೋಟೆ ಭೇದಿಸುವುದೇ ಕಾಂಗ್ರೆಸ್?