Site icon Vistara News

Pathaan Film | ಪಠಾಣ್​ ಸಿನಿಮಾ ಪೋಸ್ಟರ್​ ಹಾಕಿದ್ದ ಮಾಲ್​ ಮೇಲೆ ಬಜರಂಗ ದಳ ದಾಳಿ; ಜೈ ಶ್ರೀರಾಮ್​ ಎನ್ನುತ್ತ ದಾಂಗುಡಿ ಇಟ್ಟ ಕಾರ್ಯಕರ್ತರು

Gujarat

ಅಹ್ಮದಾಬಾದ್​: ಶಾರೂಖ್​ಖಾನ್​-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್​ ಸಿನಿಮಾ ಇದೇ ತಿಂಗಳು 25ರಂದು ಬಿಡುಗಡೆಯಾಗಲಿದ್ದು, ಟ್ರೇಲರ್​ ಜನವರಿ 10ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಆದರೆ ಈ ಸಿನಿಮಾ ಈಗಾಗಲೇ ‘ಕೇಸರಿ ವಿವಾದ’ ಸೃಷ್ಟಿಸಿದ್ದು ಅಸಂಖ್ಯಾತ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದೆ. ಪಠಾಣ್​ ಸಿನಿಮಾದಲ್ಲಿರುವ ಬೇಷರಮ್​ ರಂಗ್​ (ನಾಚಿಕೆಯಿಲ್ಲದ ಬಣ್ಣ) ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದೇ ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಹಿಂದು ಪರ ಸಂಘಟನೆಗಳು ಈಗಾಗಲೇ ಪಠಾಣ್​ ವಿರುದ್ಧ ತಿರುಗಿಬಿದ್ದಿವೆ.

ಈ ಮಧ್ಯೆ ಗುಜರಾತ್​​ನ ಅಹ್ಮದಾಬಾದ್​​ನ ಅಲ್ಫಾವನ್​ ಮಾಲ್​​ನಲ್ಲಿ ಪಠಾಣ್​ ಸಿನಿಮಾ ಪ್ರಮೋಶನ್​ ನಿಮಿತ್ತ ಪೋಸ್ಟರ್​ ಹಾಕಿದ್ದಕ್ಕೆ ಕ್ರೋಧಗೊಂಡ ಹಿಂದು ಸಂಘಟನೆ ಬಜರಂಗ​ ದಳದ ಕಾರ್ಯಕರ್ತರು ಅಲ್ಲಿಗೆ ನುಗ್ಗಿ ದಾಂಧಲೆ ಸೃಷ್ಟಿಸಿದ್ದಾರೆ. ಕೇಸರಿ ಶಾಲು ಹೊದ್ದು, ಗದೆಯನ್ನು ಹಿಡಿದು, ಜೈಶ್ರೀರಾಮ್​ ಎಂದು ಕೂಗುತ್ತ ಮಾಲ್​​ಗೆ ದಾಂಗುಡಿ ಇಟ್ಟ ಬಜರಂಗ​ ದಳ ಸಂಘಟನೆ ಕಾರ್ಯಕರ್ತರು ಅಲ್ಲಿನ ಪೋಸ್ಟರ್​ಗಳನ್ನೆಲ್ಲ ಹರಿದುಹಾಕಿದ್ದಾರೆ. ಆ ಪೋಸ್ಟರ್​​ಗಳನ್ನು ಕೆಡವಿ, ಅದನ್ನು ತುಳಿದು ತಮ್ಮ ಆಕ್ರೋಶ ತೋರಿಸಿದ್ದಾರೆ. ಅಷ್ಟೇ ಅಲ್ಲ, ಆ ಮಳಿಗೆಯಲ್ಲಿ ಇದ್ದ ಇನ್ನೂ ಹಲವು ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಮಾಲ್​​ನೊಳಗೆ ಸಿಕ್ಕಸಿಕ್ಕಲ್ಲಿ ದಾಳಿ ನಡೆಸಿದ್ದಾರೆ. ಜನವರಿ 25ರಂದು ಯಾವ ಕಾರಣಕ್ಕೂ ಸಿನಿಮಾ ಬಿಡುಗಡೆ ಮಾಡುವಂತಿಲ್ಲ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಈ ಮಾಲ್​ ಥಿಯೇಟರ್​​ನಲ್ಲೂ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಅದೇ ಕಾರಣಕ್ಕೆ ಪೋಸ್ಟರ್​ಗಳನ್ನು ಹಾಕಿ ಪ್ರಮೋಶನ್​ ಮಾಡಲಾಗಿತ್ತು. ಆ ವಿಚಾರ ತಿಳಿದ ಹಿಂದು ಸಂಘಟನೆ ಕಾರ್ಯಕರ್ತರು ಅಲ್ಲಿಗೆ ಆಗಮಿಸಿ ದಾಂಧಲೆ ಸೃಷ್ಟಿಸಿದ್ದಾರೆ. ಗುಜರಾತ್​​ನ ಬಜರಂಗ ದಳ ಟ್ವಿಟರ್​ ಅಕೌಂಟ್​​ನಲ್ಲಿ ವಿಡಿಯೊ ಶೇರ್ ಮಾಡಲಾಗಿದೆ.

ಶಾರುಖ್ ಖಾನ್​-ಜಾನ್ ಅಬ್ರಾಹಂ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸಿರವ ಈ ಸಿನಿಮಾದ ‘ಬೇಷರಮ್​ ರಂಗ್​’ ಹಾಡು ಡಿಸೆಂಬರ್​​ನಲ್ಲಿ ಬಿಡುಗಡೆಯಾದ ಬೆನ್ನಲ್ಲೇ ವಿವಾದವೂ ಭುಗಿಲೆದ್ದಿದೆ. ರಾಷ್ಟ್ರಾದ್ಯಂತ ಅನೇಕಾನೇಕ ಹಿಂದೂ ಕಾರ್ಯಕರ್ತರು, ಬಲಪಂಥೀಯರು, ವಿವಿಧ ರಾಜಕಾರಣಿಗಳು ಸಿನಿಮಾ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಈ ಮಧ್ಯೆ ಚಲನಚಿತ್ರದಲ್ಲಿ ವಿವಾದಾತ್ಮಕ ಹಾಡು ಮತ್ತು ದೃಶ್ಯಗಳನ್ನು ಕಟ್ ಮಾಡುವಂತೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ ಸೂಚಿಸಿದೆ.

ಇದನ್ನೂ ಓದಿ: Pathaan Film | ವಿವಾದಿತ ಪಠಾಣ್​ ಸಿನಿಮಾ ಟ್ರೇಲರ್​ ಬಿಡುಗಡೆ ದಿನಾಂಕ ಪ್ರಕಟ; ಚಿತ್ರ ರಿಲೀಸ್ ಯಾವಾಗ?

Exit mobile version