ನವದೆಹಲಿ: ಭಾರತದ ಕರೆನ್ಸಿ ನೋಟುಗಳ ಮೇಲೆ ಇರುವ ಗಾಂಧೀಜಿ ಭಾವಚಿತ್ರವನ್ನು ತೆಗೆದು, ಬದಲಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಫೋಟೋ ಪ್ರಕಟಿಸಬೇಕು ಎಂದು ಅಖಿಲ ಭಾರತ ಹಿಂದು ಮಹಾಸಭಾ (ABHM) ಕೇಂದ್ರ ಸರ್ಕಾರಕ್ಕೆ ಗ್ರಹಿಸಿದೆ. ‘ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಷ್ಚಂದ್ರ ಬೋಸ್ ಕೊಡುಗೆ ಕಡಿಮೆಯೇನೂ ಇಲ್ಲ. ಗಾಂಧೀಜಿ ಮಾತ್ರ ಅಪಾರ ಕೊಡುಗೆ ನೀಡಿದ್ದಾರೆ ಎಂಬುವುದನ್ನು ಒಪ್ಪಲು ಸಾಧ್ಯವಿಲ್ಲ. ನೇತಾಜಿಗೆ ಗೌರವಾರ್ಥವಾಗಿ ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋವನ್ನೇ ಹಾಕಬೇಕು’ ಎಂದು ಎಬಿಎಚ್ಎಂ ಕಾರ್ಯಕಾರಿ ಅಧ್ಯಕ್ಷ ಚಂದ್ರಚೂಡ ಗೋಸ್ವಾಮಿ ಹೇಳಿದ್ದಾರೆ.
ದಸರಾ ಆಚರಣೆ ವೇಳೆ ಕೋಲ್ಕತ್ತದಲ್ಲಿ ಅಖಿಲ ಭಾರತ ಹಿಂದು ಮಹಾಸಭಾದಿಂದ ಪ್ರತಿಷ್ಠಾಪಿಸಲಾಗಿದ್ದ ಮಹಿಷಾಸುರ ಮರ್ಧಿನಿ ವಿಗ್ರಹದ ಕಾಲಕೆಳಗಿನ ಮಹಿಷಾಸುರನನ್ನಾಗಿ ಗಾಂಧಿಯ ಗೊಂಬೆಯನ್ನು ಇಡಲಾಗಿತ್ತು. ಇದು ವಿವಾದ ಸೃಷ್ಟಿಯಾಗಿತ್ತು. ಗಾಂಧಿ ವಿಗ್ರಹವನ್ನು ಅಲ್ಲಿಂದ ತೆಗೆಯುವಂತೆ ಕೇಂದ್ರ ಗೃಹ ಇಲಾಖೆಯಿಂದಲೇ ಸೂಚನೆ ಬಂದಿತ್ತು. ಬಳಿಕ ಪೊಲೀಸರು ಆ ಪೆಂಡಾಲ್ಗೆ ಹೋಗಿ, ಗಾಂಧಿ ಗೊಂಬೆಯನ್ನು ಅಲ್ಲಿಂದ ತೆಗೆಸಿದ್ದರು. ಹೀಗೆ ಗಾಂಧಿ ಗೊಂಬೆಯನ್ನು ಮಹಿಷಾಸುರನಂತೆ ಬಿಂಬಿಸಿದರ ವಿರುದ್ಧ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ಗಳು ಕಿಡಿಕಾರಿದ್ದವು.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳ ವಕ್ತಾರ ಕುನಾಲ್ ಘೋಶ್ ‘ಗಾಂಧಿಯನ್ನು ಮಹಿಷಾಸುರನಂತೆ ಬಿಂಬಿಸಿದ್ದು ಅಪರಾಧ. ರಾಷ್ಟ್ರದ ಪಿತಾಮಹನಿಗೆ ಮಾಡಿದ ಅಪಮಾನ. ಇದು ಇಡೀ ದೇಶದ ನಾಗರಿಕರಿಗೇ ಅವಮಾನ ಮಾಡಿದಂತೆ. ಇಂಥದ್ದರ ಬಗ್ಗೆಯೆಲ್ಲ ಬಿಜೆಪಿ ಯಾಕೆ ಮಾತನಾಡುವುದಿಲ್ಲ? ಎಂದು ಕೇಳಿದ್ದರು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ | ನೇತಾಜಿ ಪ್ರಾಣ ಉಳಿಸಲು ತನ್ನ ಗಂಡನನ್ನೇ ಕೊಂದು ಹಾಕಿದ ನೀರಾ ಆರ್ಯ!