ಜೈಪುರ: ‘ಖಲಿಸ್ತಾನ ಚಳವಳಿ ಶುರುವಾಗಲು ಮತ್ತು ಪಂಜಾಬ್ನಲ್ಲಿ ಅಮೃತ್ಪಾಲ್ ಸಿಂಗ್ನಂಥ ಪ್ರತ್ಯೇಕತಾವಾದಿ ಹುಟ್ಟಲು ನೀವೇ ಕಾರಣ, ನಿಮ್ಮ ಹಿಂದೂ ರಾಷ್ಟ್ರವೆಂಬ ಸಿದ್ಧಾಂತವೇ ನೇರ ಕಾರಣ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಕಿಡಿಕಾರಿದ್ದಾರೆ.
ರಾಜಸ್ಥಾನದ ಭರತ್ಪುರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ‘ನರೇಂದ್ರ ಮೋದಿ ಮತ್ತು ಮೋಹನ್ ಭಾಗವತ್ ಅವರು ಹಿಂದು ರಾಷ್ಟ್ರದ ಬಗ್ಗೆ ಮಾತಾಡುತ್ತಾರೆ ಅಂದಮೇಲೆ, ನಾವ್ಯಾಕೆ ಖಲಿಸ್ತಾನದ ಬಗ್ಗೆ ಮಾತಾಡಬಾರದು? ಎಂದು ಈ ಹೊಸ ಹೋರಾಟಗಾರ ಅಮೃತ್ಪಾಲ್ ಸಿಂಗ್ ಪ್ರಶ್ನೆ ಮಾಡಿದ್ದಾನೆ. ಇಂಥ ಧೈರ್ಯ ಅವನಿಗೆ ಎಲ್ಲಿಂದ ಬಂತು? ಈ ಬಿಜೆಪಿ ಮತ್ತು ಆರ್ಎಸ್ಎಸ್ನವರ ಹಿಂದು ರಾಷ್ಟ್ರ ಸಿದ್ಧಾಂತದಿಂದ ಪ್ರಚೋದನೆಗೊಳಗಾಗಿ ಆತ ಈ ಮಾತುಗಳನ್ನಾಡಿದ್ದಾನೆ. ದೇಶದಲ್ಲಿ ಧರ್ಮ ಮತ್ತು ರಾಜಕೀಯವನ್ನು ಪರಸ್ಪರ ಬೆಸೆದಿದ್ದು ಈ ಬಿಜೆಪಿ ಮತ್ತು ಆರ್ಎಸ್ಎಸ್’ ಎಂದು ಹೇಳಿದರು.
ಧರ್ಮದ ಹೆಸರಲ್ಲಿ ಜನರನ್ನು ಓಲೈಸುವುದು ತುಂಬ ಸುಲಭ. ಆದರೆ ಇದರಿಂದ ದೇಶಕ್ಕೆ ಆಗುವ ಅನನುಕೂಲತೆಯ ಬಗ್ಗೆ ಕಳವಳ ಆಗುತ್ತಿದೆ. ಇಂದಿರಾಗಾಂಧಿಯವರು ಯಾವತ್ತೂ ಖಲಿಸ್ತಾನ ರಚನೆಗೆ ಅವಕಾಶವನ್ನೇ ಕೊಡಲಿಲ್ಲ. ಅದೇ ಕಾರಣಕ್ಕೆ ಭಾರತ ಇಂದಿಗೂ ಒಗ್ಗಟ್ಟಾಗಿ ಉಳಿದಿದೆ. ಅದೇ ಕಾರಣಕ್ಕೆ ಅವರನ್ನು ಹತ್ಯೆಗೈಯ್ಯಲಾಯಿತು ಎಂದು ಅಶೋಕ್ ಗೆಹ್ಲೋಟ್ ಪ್ರತಿಪಾದಿಸಿದರು.
ವಾರಿಸ್ ಪಂಜಾಬ್ ದೆ ಸಂಘಟನೆ ಮುಖ್ಯಸ್ಥ, ಖಲಿಸ್ತಾನಿ ಹೋರಾಟಗಾರ ಅಮೃತ್ಪಾಲ್ ಸಿಂಗ್ ಮಾರ್ಚ್ 18ರಂದು ಇನ್ನೇನು ಪೊಲೀಸರ ಕೈಯಿಗೆ ಸಿಕ್ಕಿಬೀಳಬೇಕು ಎನ್ನುವಷ್ಟರಲ್ಲಿ ಪರಾರಿಯಾಗಿದ್ದಾನೆ. ಜಲಂಧರ್ನ ನಾಕೋಡರ್ ಬಳಿ ಇವನ ಬಂಧನಕ್ಕೆ ಬಲೆ ಬೀಸಲಾಗಿತ್ತು. ಆದರೆ ಅಂದು ಆತನ ಸಹಚರರನ್ನು ಮಾತ್ರ ಅರೆಸ್ಟ್ ಮಾಡಲು ಸಾಧ್ಯವಾಯಿತು. ಅಂದಿನಿಂದ ಇಂದಿನವರೆಗೆ ಮೌನವಾಗಿದ್ದ ಅಮೃತ್ಪಾಲ್ ಸಿಂಗ್ ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊಗಳನ್ನು ಹರಿಬಿಡುತ್ತಿದ್ದಾನೆ. ಇತ್ತೀಚೆಗೆ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಆತ ‘ನಾನು ದೇಶಭ್ರಷ್ಟನಲ್ಲ. ಪರಾರಿಯೂ ಆಗಿಲ್ಲ. ಕೆಲವೇ ದಿನಗಳಲ್ಲಿ ಜಗತ್ತಿನ ಎದುರು ಬರುತ್ತೇನೆ ಎಂದು ಹೇಳಿದ್ದಾನೆ. ಅಷ್ಟೆ ಅಲ್ಲ, ಶರಣಾಗತಿ ಪ್ರಶ್ನೆಯೇ ಇಲ್ಲ ಎಂದಿದ್ದಾನೆ.