Site icon Vistara News

ನಿನಗೂ ರುಂಡ ಮುಂಡ ಬೇರೆಯಾಗಬೇಕಿದೆಯಾ?; ಕಾಳಿ ಕೈಯಲ್ಲಿ ಸಿಗರೇಟ್‌ ಕೊಟ್ಟವಳಿಗೆ ಬೆದರಿಕೆ

Kaali Poster

ನವ ದೆಹಲಿ: ಕಾಳಿಯ ಕೈಯಲ್ಲಿ ಸಿಗರೇಟ್‌ ಮತ್ತು ತೃತೀಯ ಲಿಂಗಿಗಳ ಬಾವುಟ ಹಿಡಿದಿರುವಂತೆ ಪೋಸ್ಟರ್‌ ಬಿಡುಗಡೆ ಮಾಡಿ ವಿವಾದ ಸೃಷ್ಟಿಸಿರುವ ತಮಿಳುನಾಡಿನ ಚಿತ್ರನಿರ್ಮಾಪಕಿ ಲೀನಾ ಮಣಿಮೇಕಲೈಗೆ, ಅಯೋಧ್ಯೆಯ ಹನುಮಾನ್‌ ಗಢಿ ದೇವಸ್ಥಾನದ ಮಹಾಂತ ರಾಜು ದಾಸ್‌ ಅವರು ಬೆದರಿಕೆ ಹಾಕಿದ್ದಾರೆ. ʼನಿಮಗೆ ನಿಮ್ಮ ರುಂಡ-ಮುಂಡ ಪ್ರತ್ಯೇಕಗೊಳ್ಳಬೇಕು ಎಂದು ಆಸೆ ಇದೆಯೇ?ʼ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಇವರೂ ಕೂಡ ಶಿರಚ್ಛೇದದ ಎಚ್ಚರಿಕೆಯನ್ನು ನೀಡಿದ್ದಾರೆ.

ಕಾಳಿ ಸಿನಿಮಾದ ಪೋಸ್ಟರ್‌ನ್ನು ಖಂಡಿಸಿದ ರಾಜು ದಾಸ್‌, ʼಲೀನಾಳ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್‌ ಇಡೀ ಸನಾತನ ಧರ್ಮ, ಹಿಂದು ದೇವರು-ದೇವತೆಗಳನ್ನು ಅವಮಾನಿಸುವಂತಿದೆ. ಸರ್ಕಾರ ಈ ಸಿನಿಮಾವನ್ನು ನಿಷೇಧಿಸಬೇಕು ಮತ್ತು ಗೃಹ ಸಚಿವಾಲಯ ಲೀನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೊಮ್ಮೆ ಸಿನಿಮಾ ಬಿಡುಗಡೆಯಾಗಲು ಬಿಟ್ಟರೆ ನಾವು ತುಂಬ ಕಠಿಣ ಸನ್ನಿವೇಶವನ್ನು ಸೃಷ್ಟಿ ಮಾಡುತ್ತೇವೆ. ಅದನ್ನು ನಿಭಾಯಿಸಲೂ ನಿಮಗೆ ಕಷ್ಟವಾಗಬಹುದುʼ ಎಂದು ಕೇಂದ್ರ ಸರ್ಕಾರಕ್ಕೂ ಹೇಳಿದ್ದಾರೆ. ಚಿತ್ರ ನಿರ್ಮಾಪಕಿಗೆ ಈಗಲೂ ಕ್ಷಮೆ ಕೇಳಲು ಅವಕಾಶ ಇದೆ. ಆಕೆ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದರೆ ನಾವೆಲ್ಲರೂ ಕ್ಷಮಿಸುತ್ತೇವೆ ಎಂಬುದನ್ನೂ ತಿಳಿಸಿದ್ದಾರೆ.

ಭಾರತೀಯ ಯುತ್‌ ಕಾಂಗ್ರೆಸ್‌ ಮಾಜಿ ಪ್ರಧಾನ ಕಾರ್ಯದರ್ಶಿ ಶರದ್‌ ಶುಕ್ಲಾ ಕೂಡ ಲೀನಾ ಮಣಿಮೇಕಲೈ ಹಾಕಿರುವ ಕಾಳಿ ಪೋಸ್ಟರ್‌ನ್ನು ಖಂಡಿಸಿದ್ದಾರೆ. ಈ ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಇಂಥ ವೆಬ್‌ ಸೀರಿಸ್‌, ಸಾಕ್ಷ್ಯ ಚಿತ್ರಗಳನ್ನು ನಿರ್ಮಾಣ ಮಾಡುವವರನ್ನು ಜೈಲಿಗೆ ಹಾಕಬೇಕು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಕಾಳಿ ಪೋಸ್ಟರ್‌ ವಿವಾದ; ಟಿಎಂಸಿ ಟ್ವಿಟರ್‌ ಖಾತೆ ಅನ್‌ಫಾಲೋ ಮಾಡಿದ ಸಂಸದೆ ಮಹುವಾ ಮೊಯಿತ್ರಾ

Exit mobile version