ಅಡಿಲಾಬಾದ್: ತೆಲಂಗಾಣದ ಅಡಿಲಾಬಾದ್ನಲ್ಲಿ ನಡೆದ ಘಟನೆಯೊಂದರ ವಿಡಿಯೊ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಅದೊಂದು ಪರೀಕ್ಷಾ ಕೇಂದ್ರ. ಅಲ್ಲಿ ಪರೀಕ್ಷಾರ್ಥಿಗಳನ್ನು ಪರಿಶೀಲನೆ ಮಾಡಿ ಒಳಗೆ ಬಿಡಲಾಗುತ್ತಿದೆ. ಹೀಗೆ ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡುವವರು ಹಿಂದು ಯುವತಿಯರಿಂದ ಕಿವಿಯೋಲೆ, ಗೆಜ್ಜೆ, ಬಳೆ, ಉಂಗುರ, ಮೂಗಿನ ನತ್ತು ಅಷ್ಟೇ ಅಲ್ಲ, ಮಾಂಗಲ್ಯ (ತಾಳಿ)ವನ್ನೂ ಕಳಚಿಸಿ ಒಳಗೆ ಕಳಿಸಿದ್ದಾರೆ. ಆದರೆ ಬುರ್ಕಾ ಧರಿಸಿ ಬಂದ ಯುವತಿಯರನ್ನು ಯಾವುದೇ ತಕರಾರು ಇಲ್ಲದೆ, ಹಾಗೇ ಬುರ್ಕಾ-ಹಿಜಾಬ್ ಧರಿಸಿದಂತೆಯೇ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ’-ಈ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು.
ಇದೀಗ ದೊಡ್ಡ ವಿಷಯವಾಗಿದೆ. ಪರೀಕ್ಷಾ ಕೇಂದ್ರದ ಹೊರಗೆ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರೆದುರೇ ಹಿಂದು ಯುವತಿ-ಮಹಿಳೆಯರ ಆಭರಣಗಳು, ಕೊನೆಗೆ ಮಂಗಲಸೂತ್ರವನ್ನೂ ತೆಗೆಸಲಾಯಿತು. ಅದೇ ಮುಸ್ಲಿಂ ಯುವತಿಯರನ್ನು ಬುರ್ಕಾ ಸಹಿತ ಬಿಡಲಾಯಿತು. ಇದ್ಯಾವ ನ್ಯಾಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಶುರುವಾಗಿದೆ. ಅಂದಹಾಗೇ, ಈ ಘಟನೆ ನಡೆದಿದ್ದು ಅಡಿಲಾಬಾದ್ನ ವಿದ್ಯಾರ್ಥಿ ಜ್ಯೂನಿಯರ್ ಮತ್ತು ಪದವಿ ಕಾಲೇಜಿನಲ್ಲಿ. ತೆಲಂಗಾಣ ರಾಜ್ಯ ಸಾರ್ವಜನಿಕ ಆಯೋಗ (TSPSC)ದ ಗ್ರೂಪ್ 1 ಪೂರ್ವಭಾವಿ ಪರೀಕ್ಷೆ ಅಕ್ಟೋಬರ್ 16ರಂದು ನಡೆದಿತ್ತು. ಜ್ಯೂನಿಯರ್ ಮತ್ತು ಪದವಿ ಕಾಲೇಜು ಕೂಡ ಪರೀಕ್ಷಾ ಕೇಂದ್ರವಾಗಿತ್ತು. ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ಹಿಂದು ಯುವತಿ-ಮಹಿಳೆಯರ ತಾಳಿವರೆಗೂ ತೆಗೆಸಲಾಗಿದೆ.
ವಿನೋದ್ ಬನ್ಸಾಲ್ ಎಚ್ಚರಿಕೆ
ವಿಡಿಯೊ ವೈರಲ್ ಆಗುತ್ತಿದ್ದಂತೆ ವಿಶ್ವ ಹಿಂದು ಪರಿಷತ್ ಇದನ್ನು ಖಂಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ‘ತೆಲಂಗಾಣ ಸರ್ಕಾರ ಮುಸ್ಲಿಮರನ್ನು ಓಲೈಕೆ ಮಾಡುತ್ತಿದೆ. ತೆಲಂಗಾಣ ಪರೀಕ್ಷಾ ಕೇಂದ್ರವೊಂದರಲ್ಲಿ ಹಿಂದು ಯುವತಿಯರ ಮೂಗಿನ ನತ್ತು, ಕಿವಿಯೋಲೆ, ಮಂಗಳಸೂತ್ರವನ್ನೆಲ್ಲ ತೆಗೆಸಲಾಯಿತು. ಆದರೆ ಮುಸ್ಲಿಂ ಯುವತಿಯರು ಬುರ್ಕಾ ಧರಿಸಿದ್ದರೂ ಅವರನ್ನು ಒಳಗೆ ಬಿಡಲಾಯಿತು. ಇದೊಂದು ಗಂಭೀರ ವಿಷಯ. ಇದೇ ರೀತಿ ಮುಂದುವರಿದರೆ ತೆಲಂಗಾಣ ಸರ್ಕಾರದ ಹಿಂದು ವಿರೋಧಿ ನೀತಿ ವಿರುದ್ಧ ಆಂದೋಲನ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೇ, ಬಿಜೆಪಿ ನಾಯಕರೂ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಎಲ್ಲರಿಗೂ ಒಂದೇ ನೀತಿ ಎಂದ ಟಿಆರ್ಎಸ್
ಹಿಂದು ಯುವತಿಯರಿಗೆ ಒಂದು ನ್ಯಾಯ, ಮುಸ್ಲಿಂ ಯುವತಿಯರಿಗೆ ಒಂದು ನ್ಯಾಯ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಟಿಆರ್ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ನಾಯಕ ಕ್ರಿಶನ್ ಮತ್ತೊಂದು ವಿಡಿಯೊ ಶೇರ್ ಮಾಡಿದ್ದಾರೆ. ಅದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ಬಂದ ಮುಸ್ಲಿಂ ಯುವತಿಯೊಬ್ಬಳ ಹಿಜಾಬ್ ಬಿಚ್ಚಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: Urvashi Rautela | ಹಿಜಾಬ್ ವಿರುದ್ಧ ಇರಾನ್ ಮಹಿಳೆಯರ ಪ್ರತಿಭಟನೆ: ನಟಿ ಊರ್ವಶಿ ರೌಟೇಲಾ ಕೂದಲಿಗೆ ಬಿತ್ತು ಕತ್ತರಿ!