ಲಖನೌ: ಹಿಂದುಗಳ ದಾಂಪತ್ಯ ಜೀವನದ ಬಗ್ಗೆ ಎಐಎಂಐಎಂ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಶೌಕತ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸಾರ್ವಜನಿಕವಾಗಿ ಭಾಷಣ ಮಾಡುವ ವೇಳೆ ಮಾತನಾಡಿದ ಅವರು ‘ಜನ ಹೇಳುತ್ತಾರೆ ನಾವು ಮುಸ್ಲಿಮರು ಮೂರು ಮದುವೆಯಾಗುತ್ತೇವೆ ಎಂದು. ಆದರೆ ನಾವು ಎರಡು ಮದುವೆಯಾಗಲಿ, ಮೂರು ಮದುವೆಯನ್ನೇ ಆಗಲಿ, ಎಲ್ಲ ಪತ್ನಿಯರಿಗೂ ಸಮಾನ ಗೌರವ ಕೊಡುತ್ತೇವೆ. ಸಮಾಜದಲ್ಲಿ ಸಮಾನ ಸ್ಥಾನಮಾನ ಒದಗಿಸಿಕೊಡುತ್ತೇವೆ. ಅವರ ಹೆಸರುಗಳು, ಅವರಿಂದ ಹುಟ್ಟಿದ ಮಕ್ಕಳ ಹೆಸರೆಲ್ಲ ರೇಶನ್ ಕಾರ್ಡ್ನಲ್ಲಿ ಇರುತ್ತವೆ. ಆದರೆ ಹಿಂದುಗಳು ಹಾಗಲ್ಲ, ಹೇಳಿಕೊಳ್ಳಲು ಒಂದೇ ಮದುವೆಯಾಗುತ್ತಾರೆ. ಆದರೆ ಎರಡು-ಮೂರು ಪ್ರೇಯಸಿಯರನ್ನು ಹೊಂದಿರುತ್ತಾರೆ. ಇತ್ತ ಮನೆಯಲ್ಲಿ ಹೆಂಡತಿಯನ್ನೂ ಪ್ರೀತಿಸುವುದಿಲ್ಲ, ಅತ್ತ ಆ ಪ್ರೇಯಸಿಯರಿಗೂ ಗೌರವ ಇರುವುದಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಹಾಗೇ ಜಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಶೌಕತ್ ಅಲಿ ‘ದೇಶದಲ್ಲಿ ಯಾರೇನು ಧರಿಸಬೇಕು ಎಂದು ನಿರ್ಧಾರ ಮಾಡುವುದು ಹಿಂದುತ್ವ ಅಲ್ಲ. ಆ ಹಕ್ಕು ಇರುವುದು ಸಂವಿಧಾನಕ್ಕೆ ಮಾತ್ರ. ಆದರೆ ಹಿಜಾಬ್ನಂಥ ವಿಷಯ ಇಟ್ಟುಕೊಂಡು ಬಿಜೆಪಿ ದೇಶದಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ ಎಂದೂ ಹೇಳಿದ್ದಾರೆ.
ಅಷ್ಟೇ ಅಲ್ಲ, ‘ದೇಶದಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮದರಸಾಗಳ ತೆರವು ಮಾಡಲಾಗುತ್ತಿದೆ, ಗುಂಪು ಹಲ್ಲೆ ನಡೆಸಲಾಗುತ್ತಿದೆ. ಹಿಜಾಬ್ನಂಥ ವಿಚಾರಕ್ಕೆ ನಮ್ಮ ಮೇಲೆ ದಾಳಿ ನಡೆಯುತ್ತಿದೆ. ಬಿಜೆಪಿ ಬೇರೆ ವಿಚಾರಗಳಲ್ಲಿ ದುರ್ಬಲವಾದಾಗಲೆಲ್ಲ ಮುಸ್ಲಿಮರ ವಿಷಯ ಮುನ್ನೆಲೆಗೆ ಬರುತ್ತಿದೆ’ ಎಂದು ಅಲಿ ಹೇಳಿದರು.
ಇದನ್ನೂ ಓದಿ: ಉತ್ತರಾಖಂಡ್ನಲ್ಲಿ ಉತ್ತರ ಪ್ರದೇಶ ಪೊಲೀಸರ ಗುಂಡಿಗೆ ಬಲಿಯಾದ ಬಿಜೆಪಿ ನಾಯಕನ ಪತ್ನಿ