ನವ ದೆಹಲಿ: ಭಾರತದ ಇತಿಹಾಸವನ್ನು ಉದ್ದೇಶಪೂರ್ವಕವಾಗಿಯೇ ತಿರುಚಲಾಗಿದೆ, ಸತ್ಯಗಳನ್ನು ಮರೆಮಾಚಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು. 17ನೇ ಶತಮಾನದಲ್ಲಿ ಅಹೋಮ್ ಸಾಮ್ರಾಜ್ಯ (ಈಗಿನ ಅಸ್ಸಾಂ)ದ ಸೇನಾ ಮುಖ್ಯಸ್ಥರಾಗಿದ್ದು, ಮೊಘಲರನ್ನು ಸೋಲಿಸಿದ್ದ ಲಚಿತ್ ಬರ್ಫುಕನ್ ಅವರ 400ನೇ ಜನ್ಮದಿನೋತ್ಸವ ನಿಮಿತ್ತ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ಲಚಿತ್ ದಿವಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಂದೆ ಭಾರತದ ಮೇಲೆ ದಬ್ಬಾಳಿಕೆ ಮಾಡಿದವರ ವಿರುದ್ಧ ದೇಶದ ಮೂಲೆಮೂಲೆಯಲ್ಲಿ ಹೋರಾಟ ನಡೆದಿತ್ತು. ಅದೆಷ್ಟೋ ವೀರ ಪುತ್ರ/ಪುತ್ರಿಯರು ಈ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ಬಡಿದಾಡಿದ್ದರು. ಗುವಾಹಟಿಯನ್ನು ಮೊಘಲರು ವಶಪಡಿಸಿಕೊಂಡಾಗ ಲಚಿತ್ ಬೊರ್ಫುಕನ್ ಮತ್ತು ಅವರಂಥ ಹಲವು ವೀರ ನಾಯಕರು ಹೋರಾಡಿ, ಅದನ್ನು ವಾಪಸ್ ಪಡೆದಿದ್ದಾರೆ. ಅಂದಿಗೂ-ಇಂದಿಗೂ ದಬ್ಬಾಳಿಕೆ ನಡೆಸುವವರ ವಿರುದ್ಧ ಸಮರ್ಥವಾಗಿ ಹೋರಾಡುವ ಸಾಮರ್ಥ್ಯ ಭಾರತಕ್ಕೆ ಇದೆ’ ಎಂದು ಹೇಳಿದ ಪ್ರಧಾನಿ ಮೋದಿ ‘ನಮ್ಮ ಮೇಲೆ ದಬ್ಬಾಳಿಕೆ ಮಾಡಿದವರ ವಿರುದ್ಧ ಅಂದೂ ವೀರೋಚಿತವಾಗಿ ಹೋರಾಡಿದ ವೀರರಿಗೆ ನಾವು ಸ್ವಾತಂತ್ರ್ಯಾನಂತರ ಸರಿಯಾಗಿ ನ್ಯಾಯ ಒದಗಿಸಲಿಲ್ಲ. ಭಾರತದ್ದು ಯುದ್ಧವೀರರ ಇತಿಹಾಸ, ವಿಜಯ, ತ್ಯಾಗ, ನಿಸ್ವಾರ್ಥ, ಶೌರ್ಯುಯುಕ್ತ ಇತಿಹಾಸ. ಆದರೆ ನಾವು ಕಲಿತಿದ್ದು ವಸಾಹತುಶಾಹಿ ಅಜೆಂಡಾವನ್ನು ಒಳಗೊಂಡ ಇತಿಹಾಸವನ್ನು. ಹಾಗಿದ್ದರೆ ನಮ್ಮ ಭಾರತದ ವೀರರ ಹೋರಾಟಗಳು, ಶೌರ್ಯಕ್ಕೆ ಇತಿಹಾಸದಲ್ಲಿ ಬೆಲೆಯೇ ಇಲ್ಲವೇ? ಅವು ಯಾವವೂ ಪ್ರಮುಖ ವಿಷಯಗಳೇ ಅಲ್ಲವೇ?’ ಎಂದು ನರೇಂದ್ರ ಮೋದಿ ಪ್ರಶ್ನಿಸಿದರು.
‘ಸ್ವಾತಂತ್ರ್ಯ ಬಂದ ಮೇಲೆ ವಸಾಹತು ಶಾಹಿ ಆಡಳಿತದ ಅಜೆಂಡಾಗಳು, ನಿಯಮಗಳ ವಿರುದ್ಧ ತಿರುಗಿಬಿದ್ದು, ಅದನ್ನೆಲ್ಲವನ್ನೂ ಕಿತ್ತೊಗೆಯುವ ಅಗತ್ಯವಿತ್ತು. ಆದರೆ ಅದಾಗಲಿಲ್ಲ. ಆದರೆ ಭಾರತ ಈಗ ಬದಲಾಗುತ್ತಿದೆ. ವಸಾಹತುಶಾಹಿ ಸಂಕೋಲೆಯನ್ನು ಮುರಿಯುತ್ತಿದೆ. ನಮ್ಮ ಪರಂಪರೆ, ಸಂಸ್ಕೃತಿಯನ್ನು ಆಚರಿಸುತ್ತಿದೆ. ಭಾರತ ಮಾತೆಗಾಗಿ ಹೋರಾಡಿದ ಹಿರೋಗಳನ್ನು ಅತ್ಯಂತ ಹೆಮ್ಮೆಯಿಂದ ಸ್ಮರಿಸಲಾಗುತ್ತಿದೆ. ದೇಶಕ್ಕಾಗಿ ಕಾದಾಡಿ, ಜೀವವನ್ನೇ ತ್ಯಾಗ ಮಾಡಿ, ಎಲೆಮರೆಯ ಕಾಯಿಯಂತಿರುವವರಿಗೂ ಗೌರವ ಸಲ್ಲಿಸಲಾಗುತ್ತಿದೆ. ಹೀಗೆ ನಮ್ಮ ಇತಿಹಾಸವನ್ನು ಪುನರ್ ರಚಿಸಬೇಕಾಗಿದೆ. ಅಲ್ಲಿ ನಮ್ಮವರ ಶೌರ್ಯ, ಸಾಹಸ, ಬಲಿದಾನದ ಬಗ್ಗೆ ಉಲ್ಲೇಖವಾಗಬೇಕು’ ಎಂದು ಪ್ರಧಾನಿ ಹೇಳಿದ್ದಾರೆ.
ಗುರುವಾರ ಗೃಹ ಸಚಿವ ಅಮಿತ್ ಶಾ ಕೂಡ ಇದೇ ರೀತಿ ಮಾತನಾಡಿದ್ದರು. ಭಾರತದ ಸನ್ನಿವೇಶಕ್ಕೆ ತಕ್ಕಂತೆ ಇಲ್ಲಿನ ಇತಿಹಾಸವನ್ನು ಪುನರ್ ರಚನೆ ಮಾಡಿ. ಅದಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಹೇಳಿದ್ದರು. ‘ದೇಶವನ್ನು 150 ವರ್ಷಗಳವರೆಗೆ ಆಳಿದ 30 ರಾಜವಂಶಗಳು ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಹೋರಾಟಗಾರರ ಜೀವನದ ಕುರಿತು ಸಂಶೋಧನೆ ನಡೆಸಿ’ ಎಂದು ಇತಿಹಾಸ ತಜ್ಞರಿಗೆ ಕರೆ ಕೊಟ್ಟಿದ್ದರು.
ಇದನ್ನೂ ಓದಿ: Amit Shah | ದೇಶಕ್ಕೆ ತಕ್ಕಂತೆ ಇತಿಹಾಸ ಬದಲಾಯಿಸಿ, ನಮ್ಮ ಬೆಂಬಲ ಇದೆ, ಇತಿಹಾಸಕಾರರಿಗೆ ಅಮಿತ್ ಶಾ ಅಭಯ