Site icon Vistara News

Hoax Bomb Call | ಬಾಲ್ಯ ಸ್ನೇಹಿತರು ಗರ್ಲ್​ಫ್ರೆಂಡ್ಸ್​​ ಜತೆ ಕಾಲ ಕಳೆಯಲೆಂದು ವಿಮಾನಕ್ಕೆ ಬಾಂಬ್​ ಬೆದರಿಕೆ ಹಾಕಿದ್ದವ ಅರೆಸ್ಟ್​!

Hoax Bomb Call

ನವ ದೆಹಲಿ: ಬಾಂಬ್​ ಬೆದರಿಕೆಯೊಡ್ಡಿ, ಸ್ಪೈಸ್​ ಜೆಟ್​ ವಿಮಾನ ಹಾರಾಟಕ್ಕೆ ಅಡ್ಡಿ ಉಂಟು ಮಾಡಿದ ಬ್ರಿಟಿಷ್​ ಏರ್​ವೇಸ್​​ನ ತರಬೇತಿ ನಿರತ ಟಿಕೆಟ್​ ಏಜೆಂಟ್​ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಹೆಸರು ಅಭಿನವ್​ ಪ್ರಕಾಶ್​ ಎಂದಾಗಿದ್ದು, ಈತನಿಗೆ 24ವರ್ಷ ಎನ್ನಲಾಗಿದೆ.

ಈ ಸ್ಪೈಸ್​ಜೆಟ್​ ವಿಮಾನ ಇಂದು ಸಂಜೆ 6.30ರ ಹೊತ್ತಿಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನದಿಂದ ಟೇಕ್​ ಆಫ್​ ಆಗಿ ಪುಣೆಗೆ ಹೋಗಬೇಕಿತ್ತು. ಆದರೆ ಅದಕ್ಕೂ ಮೊದಲು ಅಪರಿಚಿತ ಕರೆಯೊಂದು ಬಂದಿತ್ತು. ವಿಮಾನದಲ್ಲಿ ಬಾಂಬ್​ ಇದೆ ಎಂದು ಕರೆ ಮಾಡಿದವ ಹೇಳಿದ್ದ. ವಿಮಾನ ಸಿಬ್ಬಂದಿ, ಪ್ರಯಾಣಿಕರನ್ನೆಲ್ಲ ಸುರಕ್ಷಿತವಾಗಿ ಇಳಿಸಿ, ಇಡೀ ವಿಮಾನವನ್ನು ಜಾಲಾಡಲಾಗಿತ್ತು. ಬಾಂಬ್​ ಸ್ಕ್ವಾಡ್​​ನವರು ಅಲ್ಲಿಗೆ ಆಗಮಿಸಿದ್ದರು. ಆದರೆ ಅದರಲ್ಲೇನೂ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ. ನಂತರ ಇದೊಂದು ಹುಸಿ ಬಾಂಬ್​ ಕರೆ ಎಂದು ಪರಿಗಣನೆ ಮಾಡಲಾಗಿತ್ತು.

ಕರೆ ಮಾಡಿದವನನ್ನು ಪತ್ತೆ ಮಾಡಲು ಹೊರಟ ಪೊಲೀಸರು, ಆ ಕರೆ ಟ್ರೇಸ್​ ಮಾಡಿದಾಗ ಸಿಕ್ಕಿಬಿದ್ದವನು ಅಭಿನವ್​ ಪ್ರಕಾಶ್​. ಬ್ರಿಟಿಷ್​ ಏರ್​​ವೇಸ್​ನ ಕೌಂಟರ್​​ನಲ್ಲಿ ತರಬೇತಿ ನಿರತ ಏಜೆಂಟ್ ಆಗಿರುವ ಈತ ಹುಸಿ ಬಾಂಬ್​ ಕರೆ ಮಾಡಲು ಕಾರಣವೇನು ಎಂದು ಕೇಳಿದ್ದಕ್ಕೆ ವಿಚಿತ್ರ ಉತ್ತರ ಕೊಟ್ಟಿದ್ದಾನೆ. ‘ನನಗೆ ಕುನಾಲ್​ ಸೆಹ್ರಾವತ್​ ಮತ್ತು ರಾಕೇಶ್​ ಎಂಬ ಇಬ್ಬರು ಬಾಲ್ಯ ಸ್ನೇಹಿತರು ಇಬ್ಬರು ಇದ್ದಾರೆ. ಅವರಿಬ್ಬರೂ ಇತ್ತೀಚೆಗೆ ಮನಾಲಿಗೆ ಭೇಟಿ ಕೊಟ್ಟಿದ್ದಾಗ ಇಬ್ಬರು ಹುಡುಗಿಯರನ್ನು ಭೇಟಿಯಾದರು. ಅವರ ನಡುವೆ ಪ್ರೀತಿಯಾಗಿದೆ. ಅವರೆಲ್ಲ ದೆಹಲಿಗೆ ಬಂದಿದ್ದಾರೆ. ನನ್ನ ಸ್ನೇಹಿತರಿಗೆ ಆ ಹುಡುಗಿಯರ ಜತೆ ಇನ್ನಷ್ಟು ಹೆಚ್ಚಿನ ಸಮಯ ಕಳೆಯುವ ಬಯಕೆ. ಆದರೆ ಅವರಿಬ್ಬರೂ ಇಂದು ಸ್ಪೈಸ್​ಜೆಟ್​ ವಿಮಾನದಲ್ಲಿ ಪುಣೆಗೆ ಹೊರಟಿದ್ದರು. ಅವರನ್ನು ಹೇಗಾದರೂ ತಡೆಯಬೇಕು ಎಂದು ನನ್ನ ಸ್ನೇಹಿತರು ನನ್ನ ಬಳಿ ಹೇಳಿದರು. ಹೀಗಾಗಿ ಮೂವರೂ ಸೇರಿ ಬಾಂಬ್​ ಪ್ಲ್ಯಾನ್​ ಮಾಡಿದೆವು. ಯುವತಿಯರು ಹೋಗಬೇಕಿದ್ದ ವಿಮಾನ ಕ್ಯಾನ್ಸಲ್​ ಮಾಡುವುದು ಉದ್ದೇಶವಾಗಿತ್ತು’ ಎಂದು ಹೇಳಿದ್ದಾನೆ.

ಇದನ್ನೂ ಓದಿ: Air India | ಅಮೆರಿಕ-ಬೆಂಗಳೂರು ನಡುವೆ ಡಿಸೆಂಬರ್‌ 2ರಿಂದ ಏರ್‌ ಇಂಡಿಯಾ ನಾನ್‌ಸ್ಟಾಪ್‌ ಹಾರಾಟ

Exit mobile version