ಶ್ರೀನಗರ: 75ನೇ ವರ್ಷದ ಸ್ವಾತಂತ್ರ್ಯೋತ್ಸವ ನಿಮಿತ್ತ ಇಂದಿನಿಂದ ರಾಷ್ಟ್ರಾದ್ಯಂತ ಹರ್ ಘರ್ ತಿರಂಗಾ ಯಾತ್ರೆ ಶುರುವಾಗಿದ್ದು, ಈಗಾಗಲೇ ಅನೇಕ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಲಾಗಿದೆ. ಧ್ವಜವನ್ನು ಕೈಯಲ್ಲಿ ಹಿಡಿದು ರಸ್ತೆಗಳಲ್ಲಿ ತಿರಂಗ ಮೆರವಣಿಗೆ ಮಾಡಲಾಗುತ್ತಿದೆ. ಈ ಮಧ್ಯೆ ಲಷ್ಕರೆ ತೊಯ್ಬಾ ಉಗ್ರ ಖುಬೈರ್ ಎಂಬಾತನ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಿದೆ. ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯ, ದುರ್ಗಮ ಪ್ರದೇಶ ಭಾರತ್ ಬಾಗ್ಲಾದಲ್ಲಿ ಖುಬೈರ್ ಮನೆ ಇದೆ. ಆತನ ಸಹೋದರರು ಇಬ್ಬರು ಸೇರಿಕೊಂಡು ಈಗ ರಾಷ್ಟ್ರಧ್ವಜ ಹಾರಿಸಿ ‘ನಮಗೆ ಭಾರತೀಯರು ಎಂದು ಕರೆಸಿಕೊಳ್ಳಲು ಅತ್ಯಂತ ಹೆಮ್ಮೆಯಾಗುತ್ತಿದೆ’ ಎಂದು ತಿಳಿಸಿದ್ದರು.
ಖುಬೈರ್ ಲಷ್ಕರೆ ತೊಯ್ಬಾಕ್ಕೆ ಸೇರಿದ್ದು, ಮನೆಯಲ್ಲಿ ಇಲ್ಲ. ಇದೀಗ ಅವರ ಸೋದರರಾದ ಶಮಾಸ್ ದಿನ್ ಚೌಧರಿ ಮತ್ತು ನಜಾಬ್ ದಿನ್ ಚೌಧರಿ ಸೇರಿ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ‘ಕೇಂದ್ರ ಸರ್ಕಾರ ಇಂಥದ್ದೊಂದು ಅಭಿಯಾನ ನಡೆಸುತ್ತಿರುವುದಕ್ಕೆ ತುಂಬ ಖುಷಿಯಾಗಿದೆ. ನಮ್ಮ ಮನೆಯ ಮೇಲೆ ಕೂಡ ಇದೇ ಮೊದಲ ಬಾರಿಗೆ ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಸಿಕ್ಕಿದ್ದು ಸಂತೋಷ ಕೊಟ್ಟಿದೆ ಎಂದೂ ಹೇಳಿದ್ದಾರೆ. ಹಾಗೇ ಪ್ರಧಾನಿ ಮೋದಿಯವರಿಗೆ ಧನ್ಯವಾದವನ್ನೂ ಸಲ್ಲಿಸಿದ್ದಾರೆ.
ಹರ್ ಘರ್ ತಿರಂಗಾ
ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಹರ್ ಘರ್ ತಿರಂಗ ಅಭಿಯಾನ ಆಗಸ್ಟ್ 2ರಿಂದ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದಿಸಿದ ಲಕ್ಷಾಂತರ ಜನರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರೊಫೈಲ್ಗೆ ರಾಷ್ಟ್ರಧ್ವಜ ಫೋಟೋ ಹಾಕಿದ್ದಾರೆ. ಹಾಗೇ, ಇಂದಿನಿಂದ ಹಳ್ಳಿಹಳ್ಳಿಗಳ ಮನೆಗಳ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಲಾಗುತ್ತಿದೆ. ಹಾಗೇ, ಕೈಯಲ್ಲಿ ಧ್ವಜ ಹಿಡಿದು ಮೆರವಣಿಗೆ, ಬೈಕ್ ಜಾಥಾಗಳನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Har Ghar Tiranga | ಸೋಷಿಯಲ್ ಮೀಡಿಯಾ ಪ್ರೊಫೈಲ್ಗೆ ರಾಷ್ಟ್ರಧ್ವಜ ಚಿತ್ರ ಹಾಕಿದ ಆರ್ಎಸ್ಎಸ್