ದೆಹಲಿಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ (The Kerala story)ವನ್ನು ತೆರಿಗೆ ಮುಕ್ತ ಮಾಡುವಂತೆ ಬಿಜೆಪಿ ದೆಹಲಿ ಘಟಕ, ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿದೆ. ‘ದೆಹಲಿಯಲ್ಲಿ ಸಿನಿಮಾ ತೆರಿಗೆ ಮುಕ್ತವಾಗಬೇಕು ಮತ್ತು 15-16ನೇ ವಯಸ್ಸಿನ ಹುಡುಗಿಯರಿಗಾಗಿ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Chief Minister Arvind Kejriwal)ಗೆ ನಾವೆಲ್ಲ ಸೇರಿ ಪತ್ರ ಬರೆದಿದ್ದೇವೆ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿನಿಮಾವನ್ನು ನೋಡಬೇಕು. ತೆರಿಗೆ ಮುಕ್ತ ಮಾಡುವ ಮೂಲಕ ಸಿನಿಮಾವನ್ನು ಎಲ್ಲರೂ ನೋಡುವಂತೆ ಉತ್ತೇಜಿಸಬೇಕು. ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್ನಿಂದ ಎ ಸರ್ಟಿಫಿಕೇಟ್ ಸಿಕ್ಕಿದೆ. ಅಂದರೆ 18ವರ್ಷ ಮೇಲ್ಪಟ್ಟವರು ಮಾತ್ರ ನೋಡಬೇಕಾಗಿದೆ. ಆದರೆ ವಾಸ್ತವದಲ್ಲಿ 15-16ವರ್ಷದ ಹುಡುಗಿಯರು ಈ ಲವ್ ಜಿಹಾದ್ಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೆನ್ಸಾರ್ ಬೋರ್ಡ್ನ್ನು ಸಂಪರ್ಕಿಸಬೇಕು. ದೆಹಲಿಯಲ್ಲಿ ಈ ಚಿತ್ರಕ್ಕೆ U/A ಸರ್ಟಿಫಿಕೇಟ್ ಕೊಡಿಸಬೇಕು. ಎಲ್ಲ ವರ್ಗದವರೂ ನೋಡುವಂತಾಗಬೇಕು’ ಎಂದು ಬಿಜೆಪಿ ವಕ್ತಾರರಾದ ಪ್ರವೀಣ್ ಶಂಕರ್ ಕಪೂರ್ ಹೇಳಿದ್ದಾರೆ.
ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿ: ಹಿಂದು ಜನಜಾಗೃತಿ ಸಮಿತಿ
ಸುದಿಪ್ತೋ ಸೇನ್ ನಿರ್ದೇಶಿಸಿ, ಆದಾ ಶರ್ಮಾ ಮತ್ತಿತರರು ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಹೊಗಳಿದ್ದಾರೆ. ಕೇರಳದಲ್ಲಿ ಸಾವಿರಾರು ಹಿಂದು-ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ-ಅಫ್ಘಾನಿಸ್ತಾನಕ್ಕೆ ಕರೆದೊಯ್ದು, ಐಸಿಸ್ ಭಯೋತ್ಪಾದನಾ ಸಂಘಟನೆಗೆ ಸೇರಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಇದು ನೈಜ ಕತೆಯಾಧಾರಿತ ಸಿನಿಮಾ ಎಂದು ಚಿತ್ರದ ನಿರ್ದೇಶಕ/ನಿರ್ಮಾಪಕರು ಹೇಳಿಕೊಂಡಿದ್ದಾರೆ. ಹಲವು ರಾಜಕೀಯ ಪಕ್ಷಗಳು, ಎಡಪಂಥೀಯರ ವಿರೋಧದ ನಡುವೆಯೂ ಮೇ 5ರಂದು ಸಿನಿಮಾ ಬಿಡುಗಡೆಗೊಂಡಿದೆ. ದಿ ಕೇರಳ ಸ್ಟೋರಿಯನ್ನು ಈಗಾಗಲೇ ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ.