ಲಖನೌ: ಈ ವರ್ಷದ ಹೋಳಿ ಹಬ್ಬಕ್ಕೆ (Holi 2023) ದಿನಗಣನೆ (ಮಾ.8) ಶುರುವಾಗಿದೆ. ಆದರೆ ದೇಶದ ಅತ್ಯಂತ ದೊಡ್ಡ ಸ್ಮಶಾನಗಳಲ್ಲಿ ಒಂದಾಗಿರುವ ವಾರಾಣಸಿಯ ಹರಿಶ್ಚಂದ್ರ ಘಾಟ್‌ನಲ್ಲಿ ಶುಕ್ರವಾರವೇ ಹೋಳಿ ಸಂಭ್ರಮ ಆರಂಭವಾಗಿದೆ. ಸಾವಿರಾರು ಮಂದಿ ಚಿತೆಯ ಭಸ್ಮವನ್ನೇ ಬಣ್ಣದಂತೆ ಹಚ್ಚಿಕೊಂಡು ಕುಣಿದಾಡಿದ್ದಾರೆ.
ಇದನ್ನೂ ಓದಿ: Holi Party Trend: ಉದ್ಯಾನನಗರಿಯಲ್ಲಿ ವೀಕೆಂಡ್‌ಗೆ ಆರಂಭವಾಯ್ತು ಹೋಳಿ ಪಾರ್ಟಿ
ಹೌದು. ಕಾಶಿಯ ಅತ್ಯಂತ ವಿಶೇಷ ಹಬ್ಬವೆಂದರೆ ಅದು ಹೋಳಿ. ಹೋಳಿಗೆ ಐದು ದಿನ ಮೊದಲೇ ಮಸಣ ಹೋಳಿ ಆರಂಭವಾಗುತ್ತದೆ. ಹಿಂದೆ ಭೂಲೋಕಕ್ಕೆ ಪಾರ್ವತಿ ದೇವಿ ಬರುವುದನ್ನು ಕಾಶಿಯ ವಿಶ್ವನಾಥ ದೇಗುಲದಲ್ಲಿ ಬಣ್ಣವಾಡಿ ಸಂಭ್ರಮಿಸಲಾಯಿತಂತೆ. ಆದರೆ ಶಿವನ ಅಲೌಕಿಕ ಭಕ್ತರಿಗೆ ಅದರ ಅವಕಾಶ ಸಿಗಲಿಲ್ಲ. ಆ ಕಾರಣಕ್ಕೆ ಸ್ವತಃ ಶಿವನೇ ಮಸಣಕ್ಕೆ ಬಂದು ಚಿತಾಭಸ್ಮ ಹಚ್ಚಿಕೊಂಡು ಹೋಳಿ ಆಡಿದ್ದನಂತೆ. ಅದೇ ಹಿನ್ನೆಲೆಯಲ್ಲಿ ಪ್ರತಿ ವರ್ಷ ಇಲ್ಲಿ ಮಸಣ ಹೋಳಿಯನ್ನು ವಿಶೇಷವಾಗಿ ನಡೆಸಲಾಗುತ್ತದೆ.
ಈ ವರ್ಷದ ಮಸಣ ಹೋಳಿಯು ಶುಕ್ರವಾರ ಅಘೋರ್ ಪೀಠ ಬಾಬಾ ಕೀನರಾಮ್ ಆಶ್ರಮದಿಂದ ಆರಂಭವಾಯಿತು. ಸೋನಾರ್‌ಪುರ, ಭೇಲುಪುರ ಎಲ್ಲವನ್ನು ದಾಟಿ ಒಟ್ಟು ಐದು ಕಿ.ಮೀ.ನಷ್ಟು ದೂರ ಶೋಭಾಯಾತ್ರೆ ನಡೆಸಲಾಗಿದೆ. ಈ ಶೋಭಾಯಾತ್ರೆಯಲ್ಲಿ ಬರೋಬ್ಬರಿ 50,000 ಜನರು ಪಾಲ್ಗೊಂಡಿದ್ದರು. ಅದರಲ್ಲೂ ಸಾವಿರಾರು ಮಂದಿ ಶಿವನ ರೀತಿಯಲ್ಲೇ ಅವತಾರ ಮಾಡಿಕೊಂಡಿದ್ದು ವಿಶೇಷ. ಶೋಭಾಯಾತ್ರೆಯು ಹರಿಶ್ಚಂದ್ರ ಘಾಟ್‌ನಲ್ಲಿ ಮುಕ್ತಾಯವಾಯಿತು.
ಇದನ್ನೂ ಓದಿ: Holi Sarees Fashion: ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಲಗ್ಗೆ ಇಟ್ಟ ರಂಗು ರಂಗಿನ ಪ್ರಿಂಟೆಡ್ ಸೀರೆಗಳು
ವಿಶ್ವದ ಅತಿದೊಡ್ಡ ಸ್ಮಶಾನ ಸ್ಥಳವಾದ ಮಣಿಕರ್ಣಿಕಾ ಘಾಟ್‌ನಲ್ಲಿಯೂ ಮಸಣ ಹೋಳಿ ಆಚರಿಸಲಾಗುತ್ತದೆ. “ಮಣಿಕರ್ಣಿಕಾ ಘಾಟ್‌ನಲ್ಲಿ, ರಂಗಭಾರಿ ಏಕಾದಶಿಯ ಮಾರನೇ ದಿನ (ಶನಿವಾರ) ಮಸಣ ಹೋಳಿ ಆಚರಿಸಲಾಗುತ್ತದೆ” ಎಂದು ಮಣಿಕರ್ಣಿಕಾ ಘಾಟ್‌ನಲ್ಲಿ ಮಸಣ ಹೋಳಿಯ ಆಯೋಜಕ ಗುಲ್ಶನ್ ಹೇಳಿದರು.
ಈ ಮಸಣ ಹೋಳಿಯಲ್ಲಿ ಸಾಧು, ಸಂತರು ಸೇರಿ ಸಾಮಾನ್ಯರೂ ಕೂಡ ಭಾಗವಹಿಸುತ್ತಾರೆ. ಕೆಲವು ಕಾಲ ಈ ಹೋಳಿ ಆಚರಣೆಗೆ ನಿರ್ಬಂಧವಿತ್ತು. ಆದರೆ ಮೂರು ದಶಕಗಳ ಕಾಲದಿಂದ ಈ ಹೋಳಿ ಅತ್ಯಂತ ವಿಜ್ರಂಭಣೆಯಿಂದ ನಡೆಯುತ್ತಿದೆ. ಈ ಹೋಳಿ ನೋಡುವುದಕ್ಕೆಂದೇ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ ಎಂದು ಮಾಹಿತಿ ಕೊಟ್ಟಿದೆ ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ.