Site icon Vistara News

ಹೈದರಾಬಾದ್​ನಲ್ಲಿ ಗೃಹ ಸಚಿವ ಅಮಿತ್ ಶಾ​ ಭದ್ರತೆಯಲ್ಲಿ ಲೋಪ; ಅಡ್ಡಬಂದು ನಿಂತ ಕೆಂಪು ಕಾರು

Home Minister Amit Shah security lapse In Hyderabad

ಹೈದರಾಬಾದ್​: ಗೃಹ ಸಚಿವ ಅಮಿತ್ ಶಾ ಇಂದು ‘ಹೈದರಾಬಾದ್​ ಲಿಬರೇಶನ್​ ಡೇ (ಹೈದರಾಬಾದ್​ ವಿಮೋಚನಾ ದಿನ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ಮಾಡಿದರು. ಆದರೆ ಈ ವೇಳೆ ಅಮಿತ್​ ಶಾ ಭದ್ರತೆಯಲ್ಲಿ ಲೋಪವಾಗಿದೆ. ಟಿಆರ್​ಎಸ್​ (ತೆಲಂಗಾಣ ರಾಷ್ಟ್ರ ಸಮಿತಿ) ನಾಯಕ ಗೋಸುಲಾ ಶ್ರೀನಿವಾಸ್​ ಅವರು ತಮ್ಮ ಕಾರನ್ನು ಗೃಹ ಸಚಿವ ಅಮಿತ್​​ ಶಾ ಬೆಂಗಾವಲು ವಾಹನದ ಎದುರಿಗೆ ತಂದು ನಿಲ್ಲಿಸಿದ್ದರು. ಅವರನ್ನು ಸೆಕ್ಯೂರಿಟಿ ಸಿಬ್ಬಂದಿ ಬಲವಂತವಾಗಿ ಅಲ್ಲಿಂದ ಕಳಿಸಿದ್ದಾರೆ. ಈ ವೇಳೆ ಶ್ರೀನಿವಾಸ್​ ಕಾರಿಗೆ ಹಾನಿಯೂ ಉಂಟಾಗಿದೆ.

ಹರಿತಾ ಪ್ಲಾಜಾ ಹೋಟೆಲ್ ಬಳಿ ಟಿಆರ್​ಎಸ್​ ನಾಯಕರ ಶ್ರೀನಿವಾಸ್ ಅವರು ​ ಬಳಿ ಅಮಿತ್ ಶಾ ಅವರ ಬೆಂಗಾವಲು ವಾಹನಗಳಿಗೆ ಅಡ್ಡವಾಗಿ ತಂದು ತಮ್ಮ ಕೆಂಪನೆಯ ಕಾರನ್ನು ನಿಲ್ಲಿಸಿದರು. ಆಗ ಸಚಿವರ ಭದ್ರತಾ ಸಿಬ್ಬಂದಿ ಅದನ್ನು ಕೂಡಲೇ ತೆಗೆಯುವಂತೆ ಶ್ರೀನಿವಾಸ್​ಗೆ ಹೇಳಿದ್ದಾರೆ. ಆದರೆ ಅವರು ಮೊಂಡಾಟ ಮಾಡಿದರು. ಕಾರನ್ನು ತೆಗೆಯಲಿಲ್ಲ. ಆಗ ಭದ್ರತಾ ಸಿಬ್ಬಂದಿ ಬಲವಂತವಾಗಿಯೇ ಕಾರನ್ನು ಅಲ್ಲಿಂದ ಆಚೆಗೆ ಕಳಿಸಿದ್ದಾರೆ. ಅವರ ಕಾರಿನ ಹಿಂಭಾಗದ ಗಾಜು ಸಂಪೂರ್ಣವಾಗಿ ಒಡೆದು ಹೋಗಿದೆ.

ಆದರೆ ಶ್ರೀನಿವಾಸ್​ ಇದನ್ನು ನಾನು ಬೇಕಂತ ಮಾಡಿಲ್ಲ ಎಂದು ಹೇಳಿದ್ದಾರೆ. ‘ನಾನು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದೆ. ಅಲ್ಲಿ ಅಮಿತ್ ಶಾ ಅವರ ಬೆಂಗಾವಲು ವಾಹನಗಳೂ ಬರುತ್ತಿದ್ದವು. ಸಡನ್​ ಆಗಿ ನನ್ನ ಕಾರು ನಿಲ್ಲಿಸಿದೆ. ನನಗೆ ಆಗಲೇ ಟೆನ್ಷನ್​ ಆಗಿತ್ತು. ಅಷ್ಟರಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿ ಬಂದು ಕಾರು ತೆಗೆಯುವಂತೆ ಹೇಳಿದರು. ಹೋಗುತ್ತೇನೆ..ಬಿಡಿ ಎಂದು ಹೇಳುತ್ತಿದ್ದರೂ ಕೇಳಲಿಲ್ಲ, ಅಷ್ಟರಲ್ಲಿಯೇ ನನ್ನ ಕಾರನ್ನು ಧ್ವಂಸ ಮಾಡಿದ್ದಾರೆ. ವೃಥಾ ಸ್ಥಳದಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದಾರೆ’ ಎಂದಿದ್ದಾರೆ.

ಗೃಹ ಸಚಿವ ಅಮಿತ್​ ಶಾ ಇತ್ತೀಚೆಗೆ ಮುಂಬೈಗೆ ಭೇಟಿಕೊಟ್ಟಿದ್ದಾಗಲೂ ಅವರ ಭದ್ರತೆಯಲ್ಲಿ ಲೋಪವಾಗಿತ್ತು. ಏಕನಾಥ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್​ರನ್ನು ಅವರು ಭೇಟಿಯಾದ ವೇಳೆ ಹೇಮಂತ್​ ಪವಾರ್​ ಎಂಬಾತ ತಾನೂ ಒಬ್ಬ ಭದ್ರತಾ ಸಿಬ್ಬಂದಿ ಎಂದು ಬಿಂಬಿಸಿಕೊಂಡು ಅಮಿತ್ ಶಾ ಸುತ್ತಮುತ್ತ ತಿರುಗುತ್ತಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Cloth Politics | ಅಮಿತ್‌ ಶಾ ಮಫ್ಲರ್‌ ಬೆಲೆ 80 ಸಾವಿರ ರೂ., ಬಿಜೆಪಿ ಟಿ ಶರ್ಟ್‌ ಏಟಿಗೆ ಕಾಂಗ್ರೆಸ್‌ ಎದುರೇಟು!

Exit mobile version