Site icon Vistara News

ಪ್ಲೇಟ್​ಲೆಟ್​ ಬದಲು ಮೂಸಂಬಿ ಜ್ಯೂಸ್​ ಕೊಟ್ಟ ಪ್ರಕರಣ; ಪ್ರಯಾಗ್​ರಾಜ್​ ಆಸ್ಪತ್ರೆಗೆ ‘ಬುಲ್ಡೋಜರ್’​ ಕಂಟಕ !

hospital which gave fruit juice to dengue patient to be bulldozed Soon

ಪ್ರಯಾಗ್​ರಾಜ್​: ಡೆಂಗ್ಯೂ ರೋಗಿಗೆ ಐವಿ ಡ್ರಿಪ್​​ ಎಂದು ಪ್ಲೇಟ್​​​ಲೆಟ್​ ಬದಲಾಗಿ ಮೂಸಂಬಿ ಜ್ಯೂಸ್​ ನೀಡಿದ್ದ ಗ್ಲೋಬಲ್​ ಆಸ್ಪತ್ರೆಗೆ ಈಗ ಸಂಕಷ್ಟ ಎದುರಾಗಿದೆ. ಈ ಆಸ್ಪತ್ರೆ ಕಟ್ಟಡ ಅಕ್ರಮವಾಗಿದ್ದು ಬುಲ್ಡೋಜರ್ ಮೂಲಕ ಧ್ವಂಸಗೊಳಿಸುವುದಾಗಿ ಪ್ರಯಾಗ್​ರಾಜ್​ ಅಭಿವೃದ್ಧಿ ಪ್ರಾಧಿಕಾರ ನೋಟಿಸ್​ ಕೊಟ್ಟಿದೆ. ಹಾಗೇ, ಅಕ್ಟೋಬರ್​ 28ರೊಳಗೆ ಕಟ್ಟಡ ಖಾಲಿ ಮಾಡುವಾಂತೆ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದೆ. ಆಸ್ಪತ್ರೆಯಲ್ಲಿ ಇತ್ತೀಚೆಗೆ ಡೆಂಗ್ಯೂ ರೋಗಿಯೊಬ್ಬ ಸಾವನ್ನಪ್ಪಿದ್ದ. ಆತನಿಗೆ ರಕ್ತದ ಪ್ಲೇಟ್​ಲೆಟ್​ ಕೊಡುವ ಬದಲು ಆಸ್ಪತ್ರೆ ಸಿಬ್ಬಂದಿ ಮೂಸುಂಬಿ ಜ್ಯೂಸ್ ಕೊಟ್ಟಿದ್ದಾರೆ. ಹಾಗಾಗಿಯೇ ಅವನು ಸಾವನ್ನಪ್ಪಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದರು. ಈ ಸಂಬಂಧ 12 ಜನರ ಬಂಧನವೂ ಆಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಜೇಶ್​ ಪಾಠಕ್​, ‘ಪ್ರಯಾಗ್​ರಾಜ್​ ಗ್ಲೋಬಲ್ ಆಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಗೆ ಐವಿ ಡ್ರಿಪ್​​ ಆಗಿ ಮೂಸುಂಬಿ ಜ್ಯೂಸ್​ ಕೊಟ್ಟಿರುವ ಬಗ್ಗೆ ವಿಡಿಯೊ ವೈರಲ್​ ಆಗುತ್ತಿದೆ. ಆ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಸ್ಪತ್ರೆಯನ್ನು ಈಗಾಗಲೇ ಸೀಲ್​ ಮಾಡಲಾಗಿದೆ. ಅಲ್ಲಿದ್ದ ಪ್ಲೇಟ್​ಲೆಟ್​ ಪ್ಯಾಕೆಟ್​​ಗಳನ್ನೆಲ್ಲ ಪರಿಶೀಲನೆಗಾಗಿ ಕಳಿಸಲಾಗಿದೆ. ಅದರಲ್ಲಿ ಯಾರೇ ತಪ್ಪಿತಸ್ಥರು ಎಂದು ಸಾಬೀತಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಆದರೆ ಆಸ್ಪತ್ರೆ ಆಡಳಿತ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದೆ. ನಾವು ಯಾವುದೇ ರೋಗಿಗಳಿಗೂ ಮೂಸಂಬಿ ಜ್ಯೂಸ್​ ಕೊಟ್ಟಿಲ್ಲ. ಪ್ಲೇಟ್​ಲೆಟ್​ಗಳನ್ನೇ ನೀಡಲಾಗಿದೆ. ಎಸ್​ಆರ್​ಎನ್​ ಬ್ಲಡ್​ ಬ್ಯಾಂಕ್​​ನಿಂದ ತಂದಿದ್ದ ಪ್ಲೇಟ್​​ಲೆಟ್​​ಗಳನ್ನೇ ಕೊಡಲಾಗಿತ್ತು. ಇದರಲ್ಲಿ ಆಸ್ಪತ್ರೆಯವರ ತಪ್ಪು ಏನೂ ಇಲ್ಲ ಎಂದೂ ಹೇಳಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಮಧ್ಯೆ ಇದೊಂದು ಅಕ್ರಮ ಕಟ್ಟಡ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಧ್ವಂಸ ಮಾಡುವುದಾಗಿ ನೋಟಿಸ್ ಕೊಡಲಾಗಿದೆ.

ಇದನ್ನೂ ಓದಿ: Mosambi Platelets | ಮೂಸಂಬಿ ಪ್ಲೇಟ್‌ಲೆಟ್ ಕೇಸ್: 10 ಜನರನ್ನು ಬಂಧಿಸಿದ ಯುಪಿ ಪೊಲೀಸ್

Exit mobile version