ನವದೆಹಲಿ: ಭಾರತದಲ್ಲಿ ಏಳು ದಶಕಗಳ ಬಳಿ ಚೀತಾ (Cheetah In India) ಸಂತತಿ ಮತ್ತೆ ಆರಂಭವಾಗಿದೆ. ನಮೀಬಿಯಾದಿಂದ ಬಂದ ಚೀತಾಗಳು ಅರಣ್ಯವೆಂಬ ಗೂಡು ಸೇರಿವೆ. ಇದರ ಬೆನ್ನಲ್ಲೇ ದೇಶಾದ್ಯಂತ ಚೀತಾಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಚೀತಾಗಳ ಓಟ, ಅವುಗಳ ಜೀವನ ಶೈಲಿ, ಮೈಬಣ್ಣ ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಗುತ್ತಿದೆ. ಆದರೆ, ಜಗತ್ತಿನಲ್ಲಿ ಯಾವುದೇ ಸ್ಪೋರ್ಟ್ಸ್ ಕಾರಿಗಿಂತ ವೇಗವಾಗಿ ಓಡುವ ಚೀತಾ, ಸುದೀರ್ಘವಾಗಿ ಅದೇ ವೇಗ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಎಂಬ ಖ್ಯಾತಿ ಚೀತಾಗಳದ್ದಾಗಿದೆ. ಇವು ಗಂಟೆಗೆ ೭೫ ಕಿ.ಮೀದಿಂದ ೧೨೦ ಕಿ.ಮೀ ವೇಗವಾಗಿ ಓಡುತ್ತವೆ. ಗರಿಷ್ಠ ವೇಗವು ಗಂಟೆಗೆ ೧೦೪ ಕಿ.ಮೀದಿಂದ ೧೨೦ ಕಿ.ಮೀ ಆಗಿರುತ್ತದೆ. ಇದರ ಸರಾಸರಿ ವೇಗವು ಗಂಟೆಗೆ ೬೪ ಕಿ.ಮೀ ಇರುತ್ತದೆ. ಅಷ್ಟೇ ಅಲ್ಲ, ಇದು ಕೇವಲ ಎರಡು ಸೆಕೆಂಡ್‌ನಲ್ಲಿ ಗಂಟೆಗೆ ೭೫ ಕಿ.ಮೀ ವೇಗ ಪಡೆದುಕೊಳ್ಳಬಹುದು. ಮೂರು ಸೆಕೆಂಡ್‌ನಲ್ಲಿ ೯೬ ಕೆಎಂಎಚ್ ವೇಗ ಪಡೆಯಬಹುದು. ಆದರೆ, ಇದೇ ವೇಗವನ್ನು ಸುದೀರ್ಘ ಅವಧಿಗೆ ಕಾಪಾಡಿಕೊಳ್ಳಲು ಆಗುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಹಾಗಾಗಿ, ಸಾಮಾನ್ಯವಾಗಿ ಚಿರತೆಯು ತುಂಬ ಓಡುವ ಬದಲು, ೩೦ ಸೆಕೆಂಡ್‌ನಲ್ಲಿಯೇ ಬೇಟೆಯನ್ನು ಹಿಡಿಯುವ ಪ್ರಯತ್ನ ಮಾಡುತ್ತದೆ ಎಂದು ತಿಳಿದುಬಂದಿದೆ. ೩೦ ಸೆಕೆಂಡ್‌ನಲ್ಲಿಯೇ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿಯೇ ಚೀತಾ ಬೇಟೆಯಾಡಲು ಗರಿಷ್ಠ ಪ್ರಯತ್ನ ಮಾಡುತ್ತದೆ. ಏಕೆಂದರೆ, ಅದಕ್ಕೆ ಸುದೀರ್ಘ ಅವಧಿಗೆ ಗರಿಷ್ಠ ವೇಗದಲ್ಲಿ ಓಡಲು ಆಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಚೀತಾ ವೇಗಕ್ಕೆ ಕಾರಣವೇನು?
ವೇಗವಾಡಿ ಓಡಲೆಂದೇ ಚೀತಾದ ದೇಹವನ್ನು ವಿನ್ಯಾಸಗೊಳಿಸಲಾಗಿದೆ ಎಂಬಂತೆ ಅದರ ದೇಹವಿರುತ್ತದೆ. ಸಣ್ಣ ತಲೆಯು ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಚಪ್ಪಟೆಯಾದ ಪಕ್ಕೆಲುಬು ಹಾಗೂ ನೇರವಾದ ಕಾಲುಗಳು ಓಟಕ್ಕೆ ಅನುವಾಗಿವೆ. ಉಗುರು, ಪಾದ, ಉದ್ದನೆಯ ಬಾಲ, ಬಾಗುವ ಬೆನ್ನುಹುರಿಯು ವೇಗದ ಓಟಕ್ಕೆ ನೆರವಾಗುತ್ತವೆ.
ಇದನ್ನೂ ಓದಿ | Madhya Pradesh : 7 ದಶಕದ ಬಳಿಕ ಭಾರತಕ್ಕೆ ಮರಳಿತು ಚೀತಾ