Site icon Vistara News

2020ರಲ್ಲಿ ಡೊನಾಲ್ಡ್ ಟ್ರಂಪ್​ ಕುಟುಂಬ ಭಾರತಕ್ಕೆ ಬಂದಾಗ ಅವರ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ವ್ಯಯಿಸಿದ್ದೆಷ್ಟು?!

namaste trump

ನವ ದೆಹಲಿ: ಅಮೆರಿಕದಲ್ಲಿ 2017ರಿಂದ 2021ರವರೆಗೆ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್, ಅವರ ಪತ್ನಿ ಮೆಲಾನಿಯಾ ಟ್ರಂಪ್, ಮಗಳು ಇವಾಂಕಾ ಟ್ರಂಪ್​ ಹಾಗೂ ಅಳಿಯ ಜೇರಡ್​ ಕುಶ್ನರ್​ ಮತ್ತು ಇತರ ಉನ್ನತಾಧಿಕಾರಿಗಳು 2020ರ ಫೆಬ್ರವರಿ 24-25ರಂದು ಭಾರತಕ್ಕೆ ಭೇಟಿ ಕೊಟ್ಟಿದ್ದರು. ಟ್ರಂಪ್​ ಮತ್ತು ಅವರೊಂದಿಗೆ ಬಂದವರು ಭಾರತದಲ್ಲಿ ತಂಗಿದ್ದ ಸುಮಾರು 36 ಗಂಟೆಗಳ ಕಾಲ ಅವರಿಗೆ ಭರ್ಜರಿ ಆತಿಥ್ಯವನ್ನೇ ನೀಡಲಾಗಿತ್ತು. ಅವರ ಭಾರತ ಭೇಟಿ ಸಂದರ್ಭದಲ್ಲಿ ಯಾವುದೇ ತೊಂದರೆ, ಲೋಪವಾಗದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿತ್ತು. ಹೀಗೆ ಡೊನಾಲ್ಡ್​ ಟ್ರಂಪ್​ ಮತ್ತು ಅವರ ಪತ್ನಿ, ಮಗಳು-ಅಳಿಯ, ಉನ್ನತ ಅಧಿಕಾರಿಗಳು ಭೇಟಿ ಕೊಟ್ಟಾಗ ಅವರಿಗಾಗಿ ಕೇಂದ್ರ ಸರ್ಕಾರ ಖರ್ಚು ಮಾಡಿದ ಹಣವೆಷ್ಟು? ಈ ಪ್ರಶ್ನೆಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈಗ ಉತ್ತರ ಕೊಟ್ಟಿದೆ.

ಡೊನಾಲ್ಡ್​ ಟ್ರಂಪ್​ ಮತ್ತು ನರೇಂದ್ರ ಮೋದಿ ನಡುವೆ ಉತ್ತಮ ಸ್ನೇಹವಿದೆ. ಅದು ಟ್ರಂಪ್​ ಭಾರತ ಭೇಟಿಯಲ್ಲಿ ಮತ್ತಷ್ಟು ಸ್ಪಷ್ಟವಾಗಿ ಗೋಚರಿಸಿತ್ತು. ಸುಮಾರು ಎರಡು ದಿನ ಭಾರತದಲ್ಲಿ ಇದ್ದ ಟ್ರಂಪ್​ ಮತ್ತು ಅವರ ಕುಟುಂಬದವರು ಆಗ್ರಾ, ಅಹ್ಮದಾಬಾದ್​, ನವದೆಹಲಿಯಲ್ಲಿ ಸುತ್ತಾಡಿದ್ದರು. ಮೊದಲ ದಿನ ಅಂದರೆ ಫೆಬ್ರವರಿ 24ರಂದು ಭಾರತಕ್ಕೆ ಬಂದಿಳಿದಿದ್ದ ಡೊನಾಲ್ಡ್​ ಟ್ರಂಪ್​ ತನ್ನ ಪತ್ನಿಯೊಂದಿಗೆ ಅಹ್ಮದಾಬಾದ್​ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ, ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದ್ದರು. ನಂತರ 22 ಕಿಮೀ ದೂರದ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು. ಅದಾದ ಬಳಿಕ ಮೊಟೆರಾ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಟ್ಟಿಗೆ ಪಾಲ್ಗೊಂಡಿದ್ದರು.

ಹೀಗೆ ಟ್ರಂಪ್​ ಕುಟುಂಬ ವಾಪಸ್ ಅಮೆರಿಕಕ್ಕೆ ಹೋಗುತ್ತಿದ್ದಂತೆ ಮಿಶಾಲ್ ಭತೇನಾ ಎಂಬುವರು ಆರ್​ಟಿಐ (ಮಾಹಿತಿ ಹಕ್ಕು ಕಾಯ್ದೆ)ನಡಿ ಅರ್ಜಿ ಸಲ್ಲಿಸಿ, ‘ಡೊನಾಲ್ಡ್​ ಟ್ರಂಪ್​ ಮತ್ತು ಅವರ ಕುಟುಂಬ ಭಾರತಕ್ಕೆ ಬಂದಾಗ, ಅವರ ಊಟ, ವಸತಿ, ಪ್ರಯಾಣ ಸೇರಿ, ಎಲ್ಲ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ’ ಎಂದು ಮಾಹಿತಿ ಕೇಳಿದ್ದರು. 2020ರ ಅಕ್ಟೋಬರ್​​ನಲ್ಲೇ ಈ ಮಾಹಿತಿ ಕೇಳಿದ್ದರೂ ಇದುವರೆಗೂ ಯಾವುದೇ ವಿವರವನ್ನೂ ನೀಡಿರಲಿಲ್ಲ. ಹೀಗಾಗಿ ಮಿಶಾಲ್​, ಮತ್ತೆ ಆರ್​ಟಿಐ ಆಯೋಗಕ್ಕೆ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅದಕ್ಕೀಗ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಉತ್ತರ ನೀಡಿದ್ದು ‘2020ರಲ್ಲಿ ಟ್ರಂಪ್​ ಕುಟುಂಬ ಭಾರತಕ್ಕೆ ಬಂದು 36 ಗಂಟೆಗಳ ಕಾಲ ಇಲ್ಲಿದ್ದ ಸಮಯದಲ್ಲಿ ಅವರ ವ್ಯವಸ್ಥೆಗಾಗಿ ಒಟ್ಟು 38 ಲಕ್ಷ ರೂಪಾಯಿ ವ್ಯಯಿಸಲಾಗಿದೆ’ ಎಂದು ತಿಳಿಸಿದೆ. ಹಾಗೇ ಕೊವಿಡ್​ 19 ಕಾರಣದಿಂದ ಉತ್ತರಿಸಲು ವಿಳಂಬವಾಯಿತು ಎಂದೂ ತಿಳಿಸಿದೆ.

ಇದನ್ನೂ ಓದಿ: ವಿಸ್ತಾರ Explainer | ತೈವಾನ್‌ ದ್ವೀಪದೇಶದಲ್ಲಿ ಚೀನಾ- ಅಮೆರಿಕ ತಿಕ್ಕಾಟದ ಹಕೀಕತ್ತು

Exit mobile version