ನೊಯ್ಡಾ: ಭಾನುವಾರದ ಮಧ್ಯಾಹ್ನದವರೆಗೆ ಆಕಾಶಕ್ಕೆ ಎಲ್ಲಿ ಮುತ್ತಿಕ್ಕುತ್ತವೆಯೇನೋ ಎಂಬಂತೆ, “ಗಾಂಭೀರ್ಯ”ದಿಂದ ನಿಂತಿದ್ದ ನೊಯ್ಡಾದ ಅವಳಿ ಕಟ್ಟಡಗಳು ಧರೆಗುರುಳಿವೆ. ಆದರೆ, “ಮಳೆ ನಿಂತರೂ ಮಳೆ ಹನಿ ನಿಲ್ಲದು” ಎಂಬ ಮಾತಿನಂತೆ, ಅವಳಿ ಕಟ್ಟಡಗಳು ನೆಲಸಮವಾದರೂ (Twin Tower Demolished) ಅವುಗಳ ಅವಶೇಷವು ಕಟ್ಟಡದ ಜಾಗದಲ್ಲಿ ಬೃಹದಾಕಾರವಾಗಿ ಬಿದ್ದಿದೆ. ಇದನ್ನು ವಿಲೇವಾರಿ ಮಾಡಲು ಕನಿಷ್ಠ ಮೂರು ತಿಂಗಳು ಬೇಕು ಎಂದು ಅಂದಾಜಿಸಲಾಗಿದೆ.
ಕಟ್ಟಡದ ಸುಮಾರು ೫೫ ಸಾವಿರ ಟನ್ ಅವಶೇಷವನ್ನು ಒಂದು ಸಾವಿರಕ್ಕೂ ಅಧಿಕ ಟ್ರಕ್‌ಗಳು ವಿಲೇವಾರಿ ಮಾಡಲಿವೆ. ಒಟ್ಟು ಅವಶೇಷದ ಬಹುತೇಕ ಭಾಗವನ್ನು ನೊಯ್ಡಾ ಹೊರವಲಯದ ಐದಾರು ಎಕರೆ ಪ್ರದೇಶದಲ್ಲಿ ಸುರಿಯಲು ತೀರ್ಮಾನಿಸಲಾಗಿದೆ ಎಂದು ನೊಯ್ಡಾ ಪ್ರಾಧಿಕಾರ ತಿಳಿಸಿದೆ.
“ವಾಯುಮಾಲಿನ್ಯದ ಕುರಿತ ನಿಯಮಗಳು ಹಾಗೂ ಮಾರ್ಗಸೂಚಿಯ ಅನ್ವಯವೇ ಮೂರು ತಿಂಗಳವರೆಗೆ ಅವಶೇಷವನ್ನು ತೆರವು ಮಾಡಲಾಗುತ್ತದೆ. ವೈಜ್ಞಾನಿಕವಾಗಿಯೇ ಇದರ ನಿರ್ವಹಣೆ ಮಾಡಲಾಗುವುದು” ಎಂದು ಪ್ರಾಧಿಕಾರದ ಜನರಲ್ ಮ್ಯಾನೇಜರ್ ಇಶ್ತಿಯಾಕ್ ಅಹ್ಮದ್ ಮಾಹಿತಿ ನೀಡಿದ್ದಾರೆ.
ಮುಂಬೈ ಮೂಲದ ಎಡಿಫೈಸ್ ಎಂಜಿನಿಯರಿಂಗ್ ಕಂಪನಿಯು ನೆಲಸಮದ ಯೋಜನೆ ರೂಪಿಸಿದೆ. ಇದೇ ಕಂಪನಿಯು ಅವಶೇಷದಲ್ಲಿರುವ ನಾಲ್ಕು ಸಾವಿರ ಟನ್ ಕಬ್ಬಿಣ ಹಾಗೂ ಸ್ಟೀಲ್‌ಅನ್ನು ಮಾರಾಟ ಮಾಡಿ, ನೆಲಸಮಕ್ಕೆ ವ್ಯಯಿಸಲಾದ ಹಣವನ್ನು ಸಂಗ್ರಹಿಸಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Twin Tower Demolished | ಅವಳಿ ಕಟ್ಟಡ ಕೆಡವಲು ಬಳಸಿದ ಸ್ಫೋಟಕಗಳು ಬ್ರಹ್ಮೋಸ್ನ 12 ಸಿಡಿತಲೆಗಳಿಗೆ ಸಮ !