Site icon Vistara News

Video: ಉದಯಪುರ ಹಂತಕರನ್ನು ಪೊಲೀಸರು ಬಂಧಿಸಿದ್ದು ಹೇಗೆ?; ಸಾಹಸಿ ಕಾರ್ಯಾಚರಣೆ!

Udaipur Murder

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ 48 ವರ್ಷದ ಟೇಲರ್‌ ಕನ್ಹಯ್ಯಲಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ಇಬ್ಬರನ್ನೂ ಮಂಗಳವಾರ (ಜೂ.28)ವೇ ಪೊಲೀಸರು ಬಂಧಿಸಿದ್ದಾರೆ. ಕನ್ಹಯ್ಯಲಾಲ್‌ನನ್ನು ಕೊಂದು, ನಂತರ ಇಬ್ಬರೂ ತಲೆಗೆ ಹೆಲ್ಮೆಟ್‌ ಹಾಕಿಕೊಂಡು ಮೋಟರ್‌ಬೈಕ್‌ನಲ್ಲಿ ಅತ್ಯಂತ ವೇಗವಾಗಿ ಹೋಗುತ್ತಿದ್ದರು. ಇವರು ಕಣ್ಣು ಮಾತ್ರ ಕಾಣುವಂತೆ ಇಡೀ ಮುಖ ಮುಚ್ಚಿಕೊಂಡಿದ್ದರು. ಎಷ್ಟಾಗುತ್ತೋ ಅಷ್ಟು ಬೇಗ ರಾಜಸ್ಥಾನದ ಅಜ್ಮೇರ್‌ ಶರೀಫ್‌ ದರ್ಗಾಕ್ಕೆ ಹೋಗಿ, ಅಲ್ಲಿಂದ ಪಾರಾಗುವ ಆಲೋಚನೆ ಇವರದಾಗಿತ್ತು. ಆದರೆ ಇವರ ಪ್ಲ್ಯಾನ್‌ನ್ನು ರಾಜಸ್ಥಾನ ಪೊಲೀಸರು ವಿಫಲಗೊಳಿಸಿದರು.

ಹಂತಕರನ್ನು ರಾಜಸ್ಥಾನದ ರಾಜಸಮಂದ್‌ನ ಭೀಮ್‌ ಎಂಬಲ್ಲಿ ರಸ್ತೆ ಮಧ್ಯೆಯೇ ಪೊಲೀಸರು ಅಡ್ಡಗಟ್ಟಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೇ ಇವರು ಬೈಕ್‌ ವೇಗ ಹೆಚ್ಚಿಸಿದ್ದಾರೆ. ಆದರೆ ಮೂರು ಕಾರಿನಲ್ಲಿ ಬಂದ ಪೊಲೀಸರು ಆರೋಪಿಗಳಿಗಿಂತಲೂ ಚುರುಕಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಬೈಕ್‌ ಸುತ್ತುವರಿದಿದ್ದಲ್ಲದೆ, ಬ್ಯಾರಿಕೇಡ್‌ಗಳನ್ನು ಹಾಕಿ ದಿಗ್ಬಂಧಿಸಿದ್ದಾರೆ. ಆಮೇಲೆ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಾಲಿನಿಂದ ಒದ್ದು ಅವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಇವೆಲ್ಲವನ್ನೂ ಸ್ಥಳೀಯರೊಬ್ಬರು ವಿಡಿಯೋ ಮಾಡಿಕೊಂಡಿದ್ದು, ಅದೀಗ ವೈರಲ್‌ ಆಗುತ್ತಿದೆ.

ಕನ್ಹಯ್ಯಲಾಲ್‌ ಟೇಲರ್‌ ವೃತ್ತಿ ಮಾಡಿಕೊಂಡು ಇದ್ದವರು. ಇತ್ತೀಚೆಗೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಇಸ್ಲಾಂ ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ. ನೂಪುರ್‌ ವಿರುದ್ಧ ಪ್ರತಿಭಟನೆ-ಹೋರಾಟ ನಡೆಯುತ್ತಿರುವ ಹೊತ್ತಲ್ಲೇ ಉದಯಪುರದ ಕನ್ಹಯ್ಯಲಾಲ್‌ ಸೋಷಿಯಲ್‌ ಮೀಡಿಯಾದಲ್ಲಿ ನೂಪುರ್‌ ಪರ ಪೋಸ್ಟ್‌ ಶೇರ್‌ ಆಗಿತ್ತು. ಇದೇ ಕಾರಣಕ್ಕೀಗ ಕನ್ಹಯ್ಯರನ್ನು ಮುಸ್ಲಿಂ ದುಷ್ಕರ್ಮಿಗಳು ಶಿರಚ್ಛೇದ ಮಾಡಿ ಹತ್ಯೆಗೈದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಹತ್ಯೆ; ಟೇಲರ್‌ ಕನ್ಹಯ್ಯಲಾಲ್‌ಗೆ ಮುಸ್ಲಿಂ ದುಷ್ಕರ್ಮಿಗಳು ಇರಿದಿದ್ದು 26 ಬಾರಿ

Exit mobile version