Site icon Vistara News

ಮಧ್ಯಪ್ರದೇಶದಲ್ಲಿ ಪೊಲೀಸರು, ಜೆಸಿಬಿ ಮೇಲೆ ಕಲ್ಲು ತೂರಾಟ; ಅಧಿಕಾರಿಯ ಕಾಲರ್​ ಹಿಡಿದು ಹೊಡೆದ ಬಿಜೆಪಿ ಶಾಸಕನ ಹಿಂಬಾಲಕರು

Huge Mob Attacks On Police In Madhya Pradesh

#image_title

ಮಧ್ಯಪ್ರದೇಶದಲ್ಲಿ ಎರಡು ಕಡೆ ಪೊಲೀಸರ ಮೇಲೆ ಹಲ್ಲೆಯಾಗಿದೆ. ಉಜ್ಜಯಿನಿಯ ಖೇದಿ ಎಂಬ ಗ್ರಾಮದಲ್ಲಿ ಪೊಲೀಸ್​ ಸಿಬ್ಬಂದಿಯನ್ನು ಗ್ರಾಮಸ್ಥರು ಅಟ್ಟಾಡಿಸಿ ಹೊಡೆದಿದ್ದಾರೆ. ಹಾಗೇ, ಇನ್ನೊಂದು ಕಡೆ ಬಿಜೆಪಿ ಶಾಸಕ ಮನೋಜ್​ ಚೌಧರಿಯವರ ಇಬ್ಬರು ಹಿಂಬಾಲಕರು ಪೊಲೀಸ್​ ಸಿಬ್ಬಂದಿಯೊಬ್ಬರಿಗೆ ಕಾಲರ್​ ಹಿಡಿದು ಎಳೆದು, ಹೊಡೆದಿದ್ದಾರೆ.

ಖೇದಿಯಲ್ಲಿ ಏನಾಯ್ತು?
ಮಧ್ಯಪ್ರದೇಶದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರ ವಿರುದ್ಧ ಮುಲಾಜಿಲ್ಲದೆ ಜೆಸಿಬಿ ಕ್ರಮ ಕೈಗೊಳ್ಳಲಾಗುತ್ತಿದೆ. ಅತಿಕ್ರಮಣದಾರರು ಒತ್ತುವರಿ ಮಾಡಿಕೊಂಡು ಕಟ್ಟಿದ ಕಟ್ಟಡವನ್ನು ನಿರ್ದಾಕ್ಷಿಣ್ಯವಾಗಿ ಕೆಡವಲಾಗುತ್ತಿರುವುದನ್ನು ನಾವು ಕೇಳಿದ್ದೇವೆ. ಅದರಂತೆ ಖೇದಿ ಗ್ರಾಮದಲ್ಲೂ ಹಲವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದರು. ಅದನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಸಂಜಯ್​ ಸಾಹು ನೇತೃತ್ವದಲ್ಲಿ ಪೊಲೀಸರು, ಇತರ ಅಧಿಕಾರಿಗಳು ಒಟ್ಟಾಗಿ, ಜೆಸಿಬಿಯೊಂದಿಗೆ ಅಲ್ಲಿಗೆ ಹೋಗಿದ್ದರು. ಆದರೆ ಗ್ರಾಮಸ್ಥರು ರೌದ್ರಾವತಾರ ತಾಳಿದ್ದಾರೆ. ಪೊಲೀಸರು, ಜೆಸಿಬಿ ಕೆಲಸಗಾರರತ್ತ ಕಲ್ಲು ತೂರಿದ್ದಾರೆ. ಈ ಘಟನೆಯಲ್ಲಿ 9 ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ಕಾರು ಮತ್ತು ಜೆಸಿಬಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ್ದಾರೆ. ವಿಡಿಯೊ ಕೂಡ ವೈರಲ್ ಆಗಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಸಾಹು, ‘ಝಿತಾರ್ ಖೇದಿ ಗ್ರಾಮದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್​ ಪ್ರತಿಮೆಯ ಬಳಿ ಸುಮಾರು 6000 ಚದರ್​ ಅಡಿಗಳಷ್ಟು ವಿಸ್ತೀರ್ಣದ ಸರ್ಕಾರಿ ಭೂಮಿಯನ್ನು ಅಲ್ಲಿನವರು ಒತ್ತುವರಿ ಮಾಡಿದ್ದಾರೆ. ಈ ವಿಸ್ತಾರವಾದ ನೆಲವನ್ನು ಮೊದಲು ಎಲ್ಲ ಸಮುದಾಯದವರೂ ಏನಾದರೂ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ ಒತ್ತುವರಿಯಾದ ಬಳಿಕ ಅದೆಲ್ಲವೂ ನಿಂತು ಹೋಗಿತ್ತು. ಈ ಬಗ್ಗೆ ಹಳ್ಳಿಯ ಇನ್ನೊಂದು ಗುಂಪು ದೂರು ನೀಡಿತ್ತು. ಹೀಗಾಗಿ ಕ್ರಮ ಕೈಗೊಳ್ಳಲು ಅಲ್ಲಿಗೆ ಹೋಗಿದ್ದೆವು’ ಎಂದು ಹೇಳಿದ್ದಾರೆ. ಆದರೆ ಗ್ರಾಮಕ್ಕೆ ಕಾಲಿಡುತ್ತಿದ್ದಂತೆ ಮಹಿಳೆಯರು, ಮಕ್ಕಳು ಎಲ್ಲರೂ ಕಲ್ಲೆಸೆಯಲು ಪ್ರಾರಂಭಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ವಾಪಸ್​ ಬರಬೇಕಾಯಿತು ಎಂದೂ ತಿಳಿಸಿದ್ದಾರೆ.

ಶಾಸಕರ ಬೆಂಬಲಿಗರಿಂದ ಹಲ್ಲೆ
ಹಾಗೇ, ಇನ್ನೊಂದೆಡೆ ಬಿಜೆಪಿ ಶಾಸಕನ ಹಿಂಬಾಲಕರಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಯಾಗಿದೆ. ರಾಮೇಂದ್ರ ಸಿಂಗ್ ಭದೌರಿಯಾ ಎಂಬ ಪೊಲೀಸ್​ ಅಧಿಕಾರಿ ಕಾರಿನಲ್ಲಿ ಹೋಗುತ್ತಿದ್ದಾಗ, ಕಾರನ್ನು ತಡೆದ ಸಂಜಯ್​ ಸೋನಿ ಮತ್ತು ಸುಮಿತ್​ ಎಂಬುವರು ರಾಮೇಂದ್ರ ಸಿಂಗ್​ ಬಳಿ ಕೆಳಗೆ ಇಳಿಯುವಂತೆ ಹೇಳಿದ್ದಾರೆ. ರಾಮೇಂದ್ರ ಸಿಂಗ್ ಅವರು ಕಾರಿಂದ ಇಳಿಯುತ್ತಿದ್ದಂತೆ ಅವರನ್ನು ನಿಂದಿಸಿದ್ದಾರೆ. ಬಳಿಕ ಕಾಲರ್​ ಹಿಡಿದು, ಹೊಡೆದಿದ್ದಾರೆ. ಬಳಿಕ ರಾಮೇಂದ್ರ ಅವರು ವಾಕಿಟಾಕಿ ಮೂಲಕ ಇದನ್ನು ತಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹಾಗೇ, ಇವರಿಬ್ಬರೂ ಮದ್ಯಪಾನ ಮಾಡಿದ್ದರು ಎಂದು ರಾಮೇಂದ್ರ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: IAF Fighter Jets Crash: ಮಧ್ಯಪ್ರದೇಶದಲ್ಲಿ ಐಎಎಫ್​ ವಿಮಾನ ಪತನ; ಮೃತಪಟ್ಟಿದ್ದು ಬೆಳಗಾವಿ ಮೂಲದ ವಿಂಗ್​ ಕಮಾಂಡರ್​

ಸಂಜಯ್​ ಸೋನಿ ಮತ್ತು ಸುಮಿತ್​ ವಿರುದ್ಧ ನಹಾರ್​ ದಾರ್ವಾಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಬ್ಬರ ವಿರುದ್ಧ ಕೇಸ್​ ದಾಖಲಾಗುವುದನ್ನು ತಡೆಯಲು ಬಿಜೆಪಿ ಶಾಸಕ ಮನೋಜ್​ ಚೌಧರಿ ಸಹೋದರ ಪ್ರಯತ್ನ ಪಟ್ಟರು. ಆದರೆ ಅವರ ಮಾತನ್ನು ಪೊಲೀಸರು ಕಿವಿಗೆ ಹಾಕಿಕೊಂಡಿಲ್ಲ.

Exit mobile version