ನವದೆಹಲಿ: ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲು ವಿಧೇಯಕವನ್ನು ಮಂಡಿಸಲು ಆಗ್ರಹಿಸಿ ದಿಲ್ಲಿಯಲ್ಲಿ ಮಾ.10ರಂದು ಉಪವಾಸ ಸತ್ಯಾಗ್ರಹ ಆಚರಿಸಲಾಗುವುದು ಎಂದು ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಸಿ) ತೆಲಂಗಾಣ ಮುಖ್ಯಸ್ಥೆ ಹಾಗೂ ಎಂಎಲ್ಸಿ, ಕೆಸಿಆರ್ ಪುತ್ರಿ ಕೆ ಕವಿತಾ ಅವರು ಹೇಳಿದ್ದಾರೆ. ಈ ಸತ್ಯಾಗ್ರಹದಲ್ಲಿ ಒಟ್ಟು 18 ಪಕ್ಷಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಶನಿವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುವುದು ಹೇಳಿದ್ದಾರೆ. ದಿಲ್ಲಿ ಲಿಕ್ಕರ್ ಪಾಲಿಸಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ಕವಿತಾವನ್ನು ವಿಚಾರಣೆಗೊಳಪಡಿಸಲಿದೆ. ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯನ್ನು ಕೇಂದ್ರ ಏಜೆನ್ಸಿಯೊಂದು ವಿಚಾರಣೆಗೆ ಒಳಪಡಿಸುವುದು ಅಗತ್ಯವಾದರೆ, ಕಾನೂನು ಪ್ರಕಾರ ಆಕೆ ಮನೆಯಲ್ಲಿ ವಿಚಾರಣೆಗೊಳಪಡುವ ಮೂಲಭೂತ ಹಕ್ಕು ಇದೆ ಎಂದು ಹೇಳಿದರು.
ಇದನ್ನೂ ಓದಿ: Delhi Excise Policy Case: ದೆಹಲಿ ಅಬಕಾರಿ ಕೇಸ್, ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾಗೆ ಸಮನ್ಸ್
ಮಹಿಳಾ ಮೀಸಲು ವಿಧೇಯಕವನ್ನು ಜಾರಿಗೊಳಿಸುವ ಸಂಬಂಧ ಕೈಗೊಳ್ಳಲಾಗುವ ಉಪವಾಸ ಸತ್ಯಾಗ್ರಹ ಕುರಿತ ಪೋಸ್ಟರ್‌ಗಳನ್ನು ಲಾಂಚ್ ಮಾಡಿದ್ದೇವೆ. ಈ ಸತ್ಯಾಗ್ರಹದಲ್ಲಿ 18 ಪಕ್ಷಗಳು ಭಾಗವಹಿಸುವುದಾಗಿ ಹೇಳಿವೆ. ಆದರೆ, ಮಾರ್ಚ್ 9ಕ್ಕೆ ಹಾಜರಾಗುವಂತೆ ಇ.ಡಿ ಸಮನ್ಸ್ ನೀಡಿದೆ. ಮಾರ್ಚ್ 16ಕ್ಕೆ ವಿಚಾರಣೆ ನಡೆಸುವಂತೆ ಇ.ಡಿ.ಗೆ ವಿನಂತಿಸಿದೆ. ಕೊನೆಗೆ ಮಾರ್ಚ್ 11ರಂದು ವಿಚಾರಣೆ ನಡೆಯಲಿದೆ ಎಂದು ಅವರು ತಿಳಿಸಿದರು.