ತಿರುಪತಿ: ತುಂಬು ಗರ್ಭಿಣಿಯೊಬ್ಬರು ಪತಿ (Husband)ಯೊಂದಿಗೆ ಜಗಳವಾಡಿ 65 ಕಿಲೋ ಮೀಟರ್ ನಡೆದುಕೊಂಡು ಹೋಗಿ, ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆ ನಡೆದದ್ದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ನಾಯ್ಡುಪೇಟ್ ಎಂಬಲ್ಲಿ. ಮಹಿಳೆಯ ಹೆಸರು ವರ್ಷಿಣಿ ಎಂದಾಗಿದ್ದು, ಮೂಲತಃ ಪೂರ್ವ ಗೋದಾವರಿ ಜಿಲ್ಲೆಯ ವೈಎಸ್‌ಆರ್ ನಗರದವರು. ತನ್ನ ಪತಿಯೊಟ್ಟಿಗೆ ತಿರುಪತಿಗೆ ಬಂದು ನೆಲೆಸಿದ್ದರು. ಇವರಿಬ್ಬರೂ ಕೆಲಸ ಮಾಡುತ್ತಿದ್ದರು. ಇಲ್ಲಿಗೆ ಬಂದ ನಂತರ ವರ್ಷಿಣಿ ಗರ್ಭಿಣಿಯಾದರು. ಮೊದಲು ಎಲ್ಲವೂ ಚೆನ್ನಾಗೇ ಇದ್ದರೂ, ಬರುಬರುತ್ತ ಪತಿ ಸಣ್ಣಸಣ್ಣ ವಿಚಾರಗಳಿಗೂ ಜಗಳ ಮಾಡುತ್ತಿದ್ದ. ಮನೆಯಲ್ಲಿ ವರ್ಷಿಣಿ ಮತ್ತು ಆಕೆಯ ಪತಿ ನಡುವೆ ಸದಾ ಗಲಾಟೆಯಾಗುತ್ತಲೇ ಇತ್ತು.
ತುಂಬು ಗರ್ಭಿಣಿಯಾಗಿದ್ದ ವರ್ಷಿಣಿ ಈ ಜಗಳದಿಂದ ಬೇಸತ್ತು ಒಂದು ದಿನ ತನ್ನ ತವರುಮನೆಗೆ ಹೋಗಬೇಕು ಎಂದು ನಿರ್ಧರಿಸಿ ಕಾಲ್ನಡಿಗೆಯಲ್ಲೇ ಹೊರಟರು. ಅದಾಗಲೇ 9 ತಿಂಗಳು ತುಂಬಿದ್ದ ಅವರು 65 ಕಿಮೀ ದೂರವನ್ನು ಎರಡು ದಿನಗಳಲ್ಲಿ ಕ್ರಮಿಸಿ, ಅಂತೂ ನಾಯ್ಡುಪೇಟ್ ತಲುಪಿದ್ದಾರೆ. ಅಲ್ಲಿಂದ ಮುಂದೆ ಹೋಗಲು ಸಾಧ್ಯವಾಗದೆ ಅಳುತ್ತ ಕುಳಿತಿದ್ದರು. ಅದನ್ನು ನೋಡಿದ ವ್ಯಕ್ತಿಯೊಬ್ಬರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದು ವರ್ಷಿಣಿಯನ್ನು ಎತ್ತಿ ಅದರಲ್ಲಿ ಮಲಗಿಸಿದ್ದಷ್ಟೇ, ಅಲ್ಲೇ ಹೆರಿಗೆಯಾಗಿದೆ. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ತಾಯಿ-ಮಗು ಇಬ್ಬರನ್ನೂ ನೆಲ್ಲೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ವರ್ಷಿಣಿ ಎರಡು ದಿನಗಳ ಕಾಲ ಒಂದೇ ಸಮನೆ ನಡೆದಿದ್ದಾರೆ. ಅವರು ಹೊಟ್ಟೆಗೆ ಆಹಾರವನ್ನೂ ಹಾಕಿರಲಿಲ್ಲ. ಅದನ್ನು ನೋಡಿ ವೈದ್ಯರೇ ಶಾಕ್ ಆಗಿದ್ದಾರೆ. ಸದ್ಯ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ | Video | ಆಂಧ್ರಪ್ರದೇಶ ಸಾಗರ ತೀರದಲ್ಲಿ ಅಬ್ಬರದ ಅಲೆಗಳೊಂದಿಗೆ ತೇಲುತ್ತ ಬಂತೊಂದು ಚಿನ್ನದ ಬಣ್ಣದ ರಥ !