Site icon Vistara News

ಹೈದರಾಬಾದ್‌ ಗ್ಯಾಂಗ್‌ ರೇಪ್‌ ಕೇಸ್‌; ವಿಡಿಯೋ ಬಿಡುಗಡೆ ಮಾಡಿ ಟೀಕೆಗೆ ಗುರಿಯಾದ ಬಿಜೆಪಿ ಮುಖಂಡ !

BJP Leader

ನವದೆಹಲಿ: ಹೈದರಾಬಾದ್‌ನ ಜ್ಯುಬಿಲಿ ಹಿಲ್‌ ಬಳಿ ಮರ್ಸಿಡಿಸ್‌ ಕಾರಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ಕನೇ ಆರೋಪಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಒಬ್ಬ ನಾಪತ್ತೆಯಾಗಿದ್ದಾನೆ. ಇದೀಗ ಬಂಧಿತರಾಗಿರುವ ನಾಲ್ವರಲ್ಲಿ ಮೂವರು ಅಪ್ರಾಪ್ತರು ಎಂದು ಜ್ಯುಬಿಲಿ ಹಿಲ್ಸ್‌ನ ಪೊಲೀಸ್‌ ಅಧಿಕಾರಿ ಎಸ್‌.ರಾಜಶೇಖರ್‌ ರೆಡ್ಡಿ ತಿಳಿಸಿದ್ದಾರೆ. ಪಬ್‌ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಮನೆಗೆ ಡ್ರಾಪ್‌ ಕೊಡುತ್ತೇವೆ ಎಂದು ಹೇಳಿ ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಯುವಕರು ಆಕೆಯ ಮೇಲೆ ಗ್ಯಾಂಗ್‌ರೇಪ್‌ ಮಾಡಿದ್ದರು. ಘಟನೆ ನಡೆದಿದ್ದು ಮೇ 28ಕ್ಕಾದರೂ ಮೇ 31ರಂದು ಪ್ರಕರಣ ದಾಖಲಾಗಿತ್ತು. ಈ ಕೇಸ್‌ನಲ್ಲಿ ಆರೋಪಿಗಳೆಲ್ಲ ಶ್ರೀಮಂತರು, ರಾಜಕಾರಣಿಗಳು, ಪ್ರಭಾವಿಗಳ ಮಕ್ಕಳೇ ಎಂದು ಹೇಳಲಾಗಿದೆ.

ಗ್ಯಾಂಗ್‌ ರೇಪ್‌ ಮಾಡಿದ ಐವರಲ್ಲಿ ಇಬ್ಬರು ಶನಿವಾರ (ಜೂ.4)ರಂದು ಅರೆಸ್ಟ್‌ ಆಗಿದ್ದರು. ಅದರಲ್ಲಿ ಒಬ್ಬ ತೆಲಂಗಾಣದ ಆಡಳಿತ ಪಕ್ಷದ ಟಿಆರ್‌ಎಸ್‌ನ ಪ್ರಮುಖ ನಾಯಕರೊಬ್ಬರ ಪುತ್ರ. ಆತನಿಗೆ ಇನ್ನೂ 17 ವರ್ಷ. ಹಾಗೇ ಇನ್ನೊಬ್ಬ ಆರೋಪಿ ಎಐಎಂಐಎಂ ಶಾಸಕನ ಮಗನೂ ಇದ್ದಾನೆ. ಪೊಲೀಸರು ಬೇಕೆಂದೇ ಅವನ ಹೆಸರು ಹೇಳುತ್ತಿಲ್ಲ ಎಂದು ಬಿಜೆಪಿ ಆರೋಪ ಮಾಡುತ್ತಲೇ ಇದೆ. ಈಗ ಬಿಜೆಪಿ ಶಾಸಕ ರಘುನಂದನ್‌ ರಾವ್‌ ಅವರೊಂದು ವಿಡಿಯೋ ಬಿಡುಗಡೆ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ಮಾಡಿದವರಲ್ಲಿ ಎಐಎಂಐಎಂ ಶಾಸಕರೊಬ್ಬರ ಮಗನೂ ಇದ್ದಾನೆ ಎಂದು ಸಾಕ್ಷೀಕರಿಸುವ ವಿಡಿಯೋ ಇದಾಗಿದ್ದು, ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಎದುರು ಪ್ರಸ್ತುಪಡಿಸಿದ್ದಾರೆ. ಹಾಗೇ, ʼಇಲ್ಲಿ ನಾನು ಸಂತ್ರಸ್ತೆಯ ಮುಖ ತೋರಿಸುತ್ತಿಲ್ಲ. ಆದರೆ ಇಲ್ಲಿರುವ ಹುಡುಗರಲ್ಲಿ ಒಬ್ಬಾತ ಸ್ಥಳೀಯ ಎಐಎಂಐಎಂ ಶಾಸಕನ ಪುತ್ರ ಹೌದೋ-ಅಲ್ಲವೋ ಎಂದು ಪೊಲೀಸರು ಬಹಿರಂಗಪಡಿಸಲಿʼ ಎಂದು ರಘುನಂದನ್‌ ರಾವ್‌ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ʼಈ ಹುಡುಗ ಅಂದು ಕಾರಿನಲ್ಲಿ ಇದ್ದ ಎಂಬುದಕ್ಕೆ ಇಷ್ಟೆಲ್ಲ ವಿಡಿಯೋ, ಫೋಟೋಗಳ ಸಾಕ್ಷಿಯಿದ್ದರೂ ಆತನ ಹೆಸರನ್ನು ಯಾಕೆ ಆರೋಪಿಗಳ ಪಟ್ಟಿಯಲ್ಲಿ ಪೊಲೀಸರು ಸೇರಿಸಲಿಲ್ಲʼ ಎಂದೂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಬಾಲಕಿಯ ಗ್ಯಾಂಗ್‌ ರೇಪ್‌, ಐವರು ಆರೋಪಿಗಳೂ ಪಿಯುಸಿ ಹುಡುಗ್ರು!

ಬಿಜೆಪಿ ಶಾಸಕ ಹೀಗೆ ಮಾಧ್ಯಮಗಳ ಎದುರು ವಿಡಿಯೋ ಬಿಡುಗಡೆ ಮಾಡಿದ್ದನ್ನು ಕಾಂಗ್ರೆಸ್‌ ತೆಲಂಗಾಣ ಉಸ್ತುವಾರಿ, ಸಂಸದ ಮಾಣಿಕ್ಕಂ ಟಾಗೋರ್‌ ಟೀಕಿಸಿದ್ದಾರೆ. ಟ್ವೀಟ್‌ ಮಾಡಿರುವ ಅವರು, ʼನಿಮ್ಮ ರಾಜಕೀಯ ಲಾಭಕ್ಕಾಗಿ ಅತ್ಯಾಚಾರ ಸಂತ್ರಸ್ತೆಯಾಗಿರುವ ತೆಲುಗು ಹೆಣ್ಣುಮಗಳ ಗುರುತನ್ನು ಬಹಿರಂಗಪಡಿಸಿದ್ದೀರಿ. ಇದು ಸುಪ್ರೀಂಕೋರ್ಟ್‌ ಆದೇಶಕ್ಕೆ ತದ್ವಿರುದ್ಧ ನಡೆ. ನಮ್ಮ ನೆಲದ ಹೆಣ್ಣುಮಗಳನ್ನು ಸಂಘಿಗಳಾಗಲಿ, ಟಿಆರ್‌ಎಸ್‌ನವರಾಗಲಿ, ಮಜಿಲಿಸ್‌ (ಆಲ್‌ ಇಂಡಿಯಾ ಮಜಿಲಿಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್‌-ಎಐಎಂಐಎಂ)ಗಳಾಗಲೀ ಅವಮಾನಿಸಲು ನಾವು ಬಿಡುವುದಿಲ್ಲ. ನೀವೆಲ್ಲರೂ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದೀರೆಂದು ನಮಗೆ ಗೊತ್ತುʼ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಸಂತ್ರಸ್ತೆಯ ಮುಖ ಸ್ಪಷ್ಟವಾಗಿ ಕಾಣಿಸಿದೆಯೋ-ಇಲ್ಲವೋ ಗೊತ್ತಾಗಿಲ್ಲ. ಆದರೆ ಅವರು ವಿಡಿಯೋ ವೈರಲ್‌ ಮಾಡಬಾರದಿತ್ತು ಎಂಬ ಆಕ್ಷೇಪ ಕೇಳಿಬರುತ್ತಿದೆ. ಈ ಕೇಸ್‌ನಲ್ಲಿ ಟಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳ ಮುಖಂಡರ ಮಕ್ಕಳ ಹೆಸರು ಕೇಳಿಬರುತ್ತಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಹೀಗಾಗಿ ಕೇಸ್‌ನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಆಗ್ರಹಿಸುತ್ತಿವೆ.

ಇದನ್ನೂ ಓದಿ: ಹೈದರಾಬಾದ್‌ ಅಪ್ರಾಪ್ತೆ ಗ್ಯಾಂಗ್‌ ರೇಪ್‌; ಟಿಆರ್‌ಎಸ್‌ ಮುಖಂಡನ ಪುತ್ರ ಸೇರಿ ಇಬ್ಬರ ಬಂಧನ

Exit mobile version