Site icon Vistara News

ಸಿಂಗಾಪುರಕ್ಕೆ ಹೋಗಲು ಕೇಂದ್ರ ಒಪ್ಪಿಗೆ ಕೊಡುತ್ತಿಲ್ಲವೆಂದ ಕೇಜ್ರಿವಾಲ್‌; ನೀವು ಸಿಎಂ ಕಣ್ರೀ ಎಂದ ಬಿಜೆಪಿ !

arvind kejriwal

ನವ ದೆಹಲಿ: ಸಿಂಗಾಪುರದಲ್ಲಿ ಆಗಸ್ಟ್‌ ಮೊದಲವಾರದಲ್ಲಿ ನಡೆಯಲಿರುವ ವಿಶ್ವ ನಗರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತುದಿಗಾಲಿನಲ್ಲಿ ನಿಂತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರಿಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ ಎಂಬುದು ಬಹುದೊಡ್ಡ ಅಸಮಾಧಾನವಾಗಿ ಕಾಡುತ್ತಿದೆ. ಈ ಬಗ್ಗೆ ಮಾತನಾಡಿದ ಅವರು, ʼಸಿಂಗಾಪುರದಲ್ಲಿ ನಡೆಯಲಿರುವ ವಿಶ್ವ ನಗರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರದಿಂದ ಅನುಮತಿ ಕೇಳಿಯೇ ಒಂದು ತಿಂಗಳು ಕಳೆದಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದೆ. ಆದರೆ ಇನ್ನೂ ಅನುಮತಿ ಸಿಕ್ಕಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼನಾನು ಕ್ರಿಮಿನಲ್‌ ಅಲ್ಲ. ನಾನೊಬ್ಬ ಚುನಾಯಿತ ಮುಖ್ಯಮಂತ್ರಿʼ ಎಂದೂ ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಹೇಳಿದ್ದಾರೆ.

ʼಸಿಂಗಾಪುರದಲ್ಲಿ ನಡೆಯಲಿರುವ ವಿಶ್ವ ನಗರಗಳ ಸಭೆಯಲ್ಲಿ ಪಾಲ್ಗೊಂಡು, ದೆಹಲಿ ಮಾದರಿ ಆಡಳಿತದ ಬಗ್ಗೆ ವಿವರಿಸುವಂತೆ ಅಲ್ಲಿನ ಹೈಕಮಿಷನರ್‌ ಜೂನ್‌ನಲ್ಲಿ ಆಹ್ವಾನ ನೀಡಿದ್ದಾರೆ. ನಾನೂ ಕೂಡ ಅಲ್ಲಿಗೆ ತೆರಳಲು ಉತ್ಸುಕನಾಗಿದ್ದೇನೆ. ಆದರೆ ಇದುವರೆಗೂ ಅನುಮತಿ ಸಿಕ್ಕಿಲ್ಲ. ನಾನು ಅಲ್ಲಿಗೆ ಹೋಗಿ, ಭಾರತವನ್ನು ಪ್ರತಿನಿಧಿಸಿದರೆ ನಮ್ಮ ದೇಶಕ್ಕೆ ಹೆಮ್ಮೆಯೇ ಅಲ್ಲವೇ?. ಅಲ್ಲಿ ವಿಶ್ವದ ವಿವಿಧ ದೇಶಗಳ ಪ್ರಮುಖರು ಬರುತ್ತಾರೆ. ಅವರಿಗೆಲ್ಲ ನಮ್ಮ ದೆಹಲಿ ಆಡಳಿತದ ಬಗ್ಗೆ ತಿಳಿಸಬಹುದು. ಹಾಗಿದ್ದಾಗ್ಯೂ ಯಾಕೆ ನನ್ನನ್ನು ತಡೆಯಲಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಬಹುಶಃ ರಾಜಕೀಯ ಕಾರಣಕ್ಕೇ ಆಗಿರಬಹುದುʼ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ದೆಹಲಿ ಮಾದರಿ ಆಡಳಿತ ಎಂಬುದು ಜಗತ್ತಿನಾದ್ಯಂತ ಈಗ ಸುದ್ದಿಯಾಗಿದೆ. ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ದೆಹಲಿ ಮಾದರಿ ಆಡಳಿತವೂ ಒಂದು ಕಾರಣವಾಗಿದೆ. ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಬಂದಿದ್ದಾಗ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಶಾಲೆಗಳಿಗೆ ಭೇಟಿ ಕೊಟ್ಟು ಇಲ್ಲಿನ ವ್ಯವಸ್ಥೆ ನೋಡಿ ಶ್ಲಾಘಿಸಿದ್ದರು. ನಾರ್ವೇ ಮಾಜಿ ಪ್ರಧಾನಿಯೊಬ್ಬರು ಮೊಹಲ್ಲಾ ಕ್ಲಿನಿಕ್‌ ನೋಡಲೆಂದೇ ಆಗಮಿಸಿದ್ದರು. ಇದನ್ನೆಲ್ಲ ಸರ್ಕಾರ ಮರೆಯಬಾರದು ಎಂದೂ ಅವರು ಹೇಳಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ ಏನು?
ಅರವಿಂದ್‌ ಕೇಜ್ರಿವಾಲ್‌ ಆರೋಪಗಳಿಗೆ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್‌ ಮಾಳವಿಯಾ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್‌ ಮಾಡಿರುವ ಅವರು ʼಸಿಂಗಾಪುರದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅರವಿಂದ್‌ ಕೇಜ್ರಿವಾಲ್‌ ಅನುಮತಿ ಕೇಳುತ್ತಿದ್ದಾರೆ. ಆದರೆ ಅದು ಮೇಯರ್‌ಗಳ ಸಮ್ಮೇಳನ. ಅರವಿಂದ್‌ ಕೇಜ್ರಿವಾಲ್‌ಗೆ ಅವರೊಬ್ಬ ಮುಖ್ಯಮಂತ್ರಿ ಎಂಬುದನ್ನು ಯಾರಾದರೂ ನೆನಪಿಸಿ. ಸಿಂಗಾಪುರದಲ್ಲಿ ನಡೆಯಲಿರುವ ವಿಶ್ವ ನಗರಗಳ ಶೃಂಗಸಭೆಗೆ ಸೂರತ್‌ನ ಮೇಯರ್‌ ಹೇಮಾಲಿ ಬೋಘಾವಾಲಾ ಅವರಿಗೆ ಆಹ್ವಾನವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯಾರೊಂದಿಗೂ ಮೈತ್ರಿಯಿಲ್ಲ, ಯಾರನ್ನಾದರೂ ಸೋಲಿಸಬೇಕೆಂಬ ಆಸೆಯೂ ಇಲ್ಲ: ಅರವಿಂದ್‌ ಕೇಜ್ರಿವಾಲ್‌

Exit mobile version