Site icon Vistara News

Oscars 2023: ‘ನಾನಿನ್ನೂ ನಡುಗುತ್ತಿದ್ದೇನೆ‘; ಆಸ್ಕರ್​ ಗೆದ್ದ ಬಳಿಕದ ಉದ್ವೇಗ ವ್ಯಕ್ತಪಡಿಸಿದ ದಿ ಎಲಿಫೆಂಟ್​ ವಿಸ್ಪರರ್ಸ್ ನಿರ್ಮಾಪಕಿ

I am still shivering Says Guneet Monga After Won Oscars for Her Elephant Whisperers

#image_title

ಲಾಸ್​ ಏಂಜಲೀಸ್​, ಅಮೆರಿಕ: ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಆಸ್ಕರ್​ 2023 (Oscars 2023)ನಿಜಕ್ಕೂ ವಿಶೇಷ ಕ್ಷಣವಾಗಿದೆ. ಕಾರ್ತಿಕಿ ಗೊನ್ಸಾಲ್ವೆಸ್​ ನಿರ್ದೇಶನದ ‘ದಿ ಎಲಿಫೆಂಟ್​ ವಿಸ್ಪರರ್ಸ್​’ (Elephant Whisperers) ಡಾಕ್ಯುಮೆಂಟರಿ ‘ಆಸ್ಕರ್​​ನ ಅತ್ಯುತ್ತಮ ಕಿರುಚಿತ್ರ’ವಾಗಿ ಹೊರಹೊಮ್ಮಿದ್ದರೆ, ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನಿಮಾದ ಹಾಡು ‘ನಾಟು..ನಾಟು..’ ಬೆಸ್ಟ್ ಒರಿಜಿನಲ್​ ಕೆಟೆಗರಿಯಲ್ಲಿ ಆಸ್ಕರ್​​ ಮುಡಿಗೇರಿಸಿಕೊಂಡಿದೆ. ಭಾರತದ ಸಿನಿಪ್ರಿಯರಲ್ಲಿ ಇದು ದೊಡ್ಡಮಟ್ಟಿಗಿನ ಸಂಭ್ರಮಕ್ಕೆ ಕಾರಣವಾಗಿದೆ.

ಹೀಗೆ ಪ್ರತಿಷ್ಠಿತ ಆಸ್ಕರ್​ ಗೆಲ್ಲುತ್ತಿದ್ದಂತೆ ‘ದಿ ಎಲಿಫೆಂಟ್​ ವಿಸ್ಪರರ್ಸ್​​’ ಡಾಕ್ಯುಮೆಂಟರಿಯ ಸಹ ನಿರ್ಮಾಪಕಿ ಗುನೀತ್​ ಮೋಂಗಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ‘ಈ ಸಾಧನೆ ನನ್ನಲ್ಲಿ ನಿಜಕ್ಕೂ ಹರ್ಷ ತಂದಿದೆ. ನಾನಿನ್ನೂ ನಡುಗುತ್ತಿದ್ದೇನೆ’ ಎಂದು ತಮ್ಮಲ್ಲಾಗುತ್ತಿರುವ ಉದ್ವೇಗವನ್ನು ಅವರು ಹೊರಹಾಕಿದ್ದಾರೆ. ‘ನಾವು ನಮ್ಮ ಮೊದಲ ಆಸ್ಕರ್​ ಗೆದ್ದಿದ್ದೇವೆ. ಇಬ್ಬರು ಮಹಿಳೆಯರು ಅದನ್ನು ಸಾಧಿಸಿದ್ದಾರೆ. ನಾನಿನ್ನೂ ನಡುಗುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಹಾಗೇ, ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡ ನಿರ್ಮಾಪಕಿ ಗುನೀತ್ ಮೋಂಗಾ, ‘ಆಸ್ಕರ್​ ಗೆದ್ದ ಭಾರತದ ಮೊದಲ ಕಿರುಚಿತ್ರ ಎಂಬ ಐತಿಹಾಸಿಕ ಕ್ಷಣಕ್ಕೆ ಈ ರಾತ್ರಿ ಸಾಕ್ಷಿಯಾಯಿತು. ಈ ಕೀರ್ತಿಯನ್ನು ತಂದಿದ್ದು ಭಾರತದ ಇಬ್ಬರು ಮಹಿಳೆಯರು’ ಎಂದು ಹೇಳಿದರು. ಹಾಗೇ, ತಮ್ಮ ತಾಯಿ-ತಂದೆಗೆ, ಅವರ ಸಹ ನಿರ್ಮಾಪಕರಾದ ಅಚಿನ್ ಜೈನ್​​ರಿಗೆ, ಪತಿಗೆ ಮತ್ತು ಇಡೀ ತಂಡ, ನೆಟ್​ಫ್ಲಿಕ್ಸ್​​ಗೆ ಕೃತಜ್ಞತೆ ಸಲ್ಲಿಸಿದರು. ಹಾಗೇ, ಕಥೆಯನ್ನು ಹೆಣೆದು, ಅದಕ್ಕೊಂದು ರೂಪಕೊಟ್ಟ ನಿರ್ದೇಶಕಿ ಕಾರ್ತೀಕಿ ಅವರಿಗೆ, ಕಿರುಚಿತ್ರ ನೋಡಿದ, ನೋಡುತ್ತಿರುವ ಎಲ್ಲ ಮಹಿಳೆಯರಿಗೆ ವಿಶೇಷ ಧನ್ಯವಾದ ಎಂದೂ ಬರೆದುಕೊಂಡಿದ್ದಾರೆ. ಕೊನೇದಾಗಿ ಜೈ ಹಿಂದ್​ ಎಂದೂ ಬರೆದಿದ್ದಾರೆ.

ಅಂದಹಾಗೇ, ದಿ ಎಲಿಫೆಂಟ್​ ವಿಸ್ಪರರ್ಸ್ 41 ನಿಮಿಷಗಳ ಕಿರುಚಿತ್ರವಾಗಿದ್ದು, ನೆಟ್​ಫ್ಲಿಕ್ಸ್​​ನಲ್ಲಿ ಲಭ್ಯವಿದೆ. ಒಂದು ಅನಾಥ ಆನೆಮರಿಯನ್ನು, ದಂಪತಿ ಆರೈಕೆ ಮಾಡಿ, ಅದನ್ನು ಕಾಳಜಿ ಮಾಡುವ ಕಥೆಯನ್ನು ಇದು ಒಳಗೊಂಡಿದೆ. ಅದರಲ್ಲಿ ದಂಪತಿ ಮತ್ತು ಅನಾಥ ಆನೆ ನಡುವಿನ ಬಾಂಧವ್ಯ ನೋಡುಗರ ಹೃದಯಸ್ಪರ್ಶಿಸುತ್ತದೆ.

Exit mobile version