ನವ ದೆಹಲಿ: ಕಳೆದ ಮೂರ್ನಾಲ್ಕು ದಿನಗಳಿಂದಲೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೆಸರು ಕೇಳಿಬರುತ್ತಿತ್ತು. ಆದರೆ ಇಂದು ನಾಮಪತ್ರ ಸಲ್ಲಿಕೆಯ ಕೊನೇದಿನ ಇಲ್ಲೊಂದು ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧೆ ಮಾಡಲಿದ್ದು, ದಿಗ್ವಿಜಯ ಸಿಂಗ್ ಹಿಂದೆ ಸರಿದಿದ್ದಾರೆ. ಆದರೆ ಹೀಗೆ ಕೊನೇ ಕ್ಷಣದಲ್ಲಿ ದಿಗ್ವಿಜಯ ಸಿಂಗ್ ಸ್ಪರ್ಧೆಯಿಂದ ಹೊರಬಿದ್ದಿದ್ದು ಯಾಕೆ? ಅವರೇ ಸ್ವತಃ ಹಿಂದೆ ಸರಿದಿದ್ದಾ ಅಥವಾ ಕಾಂಗ್ರೆಸ್ ಹೈಕಮಾಂಡ್ (ಗಾಂಧಿ ಕುಟುಂಬ)ನ ಸೂಚನೆಯಾ? ಎಂಬಿತ್ಯಾದಿ ಪ್ರಶ್ನೆಗಳೂ ಎದ್ದಿವೆ. ಹೀಗೆ ಏಕಾಏಕಿ ನಡೆದ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ದಿಗ್ವಿಜಯ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ತಾವು ಯಾಕೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದನ್ನು ತಿಳಿಸಿದ್ದಾರೆ.
‘ನಾನು ಗುರುವಾರ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ಕೊಟ್ಟಿದ್ದೆ. ಆಗಲೂ ಅವರ ಬಳಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ. ನೀವೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಿ ಎಂದಾದರೆ, ನಾನು ಸ್ಪರ್ಧಿಸುವುದಿಲ್ಲ ಎಂದೇ ಹೇಳಿದ್ದಾರೆ. ಆಗ ಅವರು ಅಂಥ ನಿರ್ಧಾರವನ್ನೇನೂ ನಾನು ಮಾಡಿಲ್ಲ ಎಂದಿದ್ದರು. ಆದರೆ ಇಂದು ಖರ್ಗೆ ನಾಮಪತ್ರ ಸಲ್ಲಿಸುತ್ತಾರೆ ಎಂಬುದು ನನಗೆ ಮಾಧ್ಯಮಗಳ ಮೂಲಕ ಗೊತ್ತಾಯಿತು. ಖರ್ಗೆಯವರು ನನಗಿಂತಲೂ ಹಿರಿಯರು. ಅವರ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಾನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಇಷ್ಟುವರ್ಷ ನನ್ನ ಜೀವನವನ್ನೆಲ್ಲ ಕಾಂಗ್ರೆಸ್ಗಾಗಿಯೇ ಮೀಸಲಿಟ್ಟೆ. ಮುಂದೆಯೂ ಕಾಂಗ್ರೆಸ್ಗಾಗೇ ಕೆಲಸ ಮಾಡುತ್ತೇನೆ. ದಲಿತರ ಹಕ್ಕು, ಕೋಮುವಾದದ ವಿರುದ್ಧದ ಹೋರಾಟ ಮತ್ತು ಪಕ್ಷದ ನಾಯಕತ್ವದಲ್ಲಿ ನಾನಿಟ್ಟ ನಂಬಿಕೆ-ಈ ಮೂರು ವಿಚಾರಗಳಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ದಿಗ್ವಿಜಯ ಸಿಂಗ್ ಸ್ಪಷ್ಟವಾಗಿಯೇ ಹೇಳಿದ್ದಾರೆ. ಅಂದರೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯಿಂದ ಹಿಂದಡಿ ಇಟ್ಟಿದ್ದು ನನ್ನ ವೈಯಕ್ತಿಕ ನಿರ್ಧಾರವೇ ಹೊರತು, ಯಾರೂ ಪ್ರಭಾವ ಬೀರಿಲ್ಲ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಗೆ ಅಪಾರ ಬೆಂಬಲ
ಕೊನೇ ಕ್ಷಣದಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಿಂತ ಮಲ್ಲಿಕಾರ್ಜುನ ಖರ್ಗೆಗೆ ಅನೇಕ ಪ್ರಮುಖ ನಾಯಕರು ಬೆಂಬಲ ಘೋಷಿಸಿದ್ದಾರೆ. ಹಿರಿಯ ನಾಯಕರಾದ ಭೂಪಿಂದರ್ ಹೂಡಾ, ಅಖಿಲೇಶ್ ಪ್ರಸಾದ್ ಸಿಂಗ್, ಪ್ರಮೋದ್ ತಿವಾರಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ದಿಗ್ವಿಜಯ ಸಿಂಗ್ ಸೇರಿ ಹಲವು ನಾಯಕರು ಖರ್ಗೆಗೇ ಮತ ಹಾಕುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Congress President | ಮಲ್ಲಿಕಾರ್ಜುನ ಖರ್ಗೆಯೇ ಕಾಂಗ್ರೆಸ್ನ ಮುಂದಿನ ಅಧ್ಯಕ್ಷ?; ದಿಗ್ವಿಜಯ ಸಿಂಗ್ ಹೊರಕ್ಕೆ!