Site icon Vistara News

ನನ್ನ ಮಗ ಮದ್ಯ ವ್ಯಸನಕ್ಕೆ ಬಲಿಯಾದ, ದಯವಿಟ್ಟು ಯಾರೂ ಈ ಚಟ ಅಂಟಿಸಿಕೊಳ್ಳಬೇಡಿ; ಕೇಂದ್ರ ಸಚಿವರ ಭಾವುಕ ಮನವಿ

Kaushal Kishore

ಲಖನೌ: ‘ನನ್ನ ಮಗ ಮದ್ಯವ್ಯಸನದಿಂದಲೇ ಮೃತಪಟ್ಟ.. ಆತನ ಪತ್ನಿ ವಿಧವೆಯಾದಳು, ನಾನೊಬ್ಬ ಸಂಸದನಾಗಿದ್ದೆ, ನನ್ನ ಪತ್ನಿ ಶಾಸಕಿಯಾಗಿದ್ದಳು. ಆದರೇನು? ಮಗನ ಮದ್ಯದ ಚಟ ಬಿಡಿಸಲು ಆಗಲಿಲ್ಲ, ಆತನ ಜೀವವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ, ದಯವಿಟ್ಟು ಯಾರೂ ಮದ್ಯವ್ಯಸನಕ್ಕೆ ಬಲಿಯಾಗಬೇಡಿ’ ಎಂದು ಕೇಂದ್ರ , ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಹಾಯಕ ಸಚಿವ ಕೌಶಲ್ ಕಿಶೋರ್ ಅತ್ಯಂತ ಭಾವುಕರಾಗಿ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದ ಲಂಭುವಾ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದ ಕೌಶಲ್​ ಕಿಶೋರ್​, 2020ರ ಅಕ್ಟೋಬರ್​ನಲ್ಲಿ ತನ್ನ ಮಗ ಮೃತಪಟ್ಟಿದ್ದನ್ನು ನೆನಪಿಸಿಕೊಂಡರು. ‘ಮದ್ಯಕ್ಕೆ ದಾಸರಾದವರ ಜೀವಿತಾವಧಿ ಅತ್ಯಂತ ಕಡಿಮೆಯಾಗಿರುತ್ತದೆ. ಅದೆಷ್ಟೇ ದೊಡ್ಡ ಹುದ್ದೆಯಲ್ಲಿರಿ, ಎಷ್ಟೇ ಹಣ ದುಡಿಯಿರಿ, ನೀವು ಅಲ್ಕೋಹಾಲ್​​ ಚಟ ಅಂಟಿಸಿಕೊಂಡಿದ್ದರೆ ನೀವೂ ಸುಖವಾಗಿ ಬಾಳಲಾರಿರಿ. ನಿಮ್ಮ ಪತ್ನಿ-ಮಕ್ಕಳನ್ನೂ ಸುಖವಾಗಿ ಇಡಲಾರಿರಿ’ ಎಂದು ಹೇಳಿದರು.

ಪುತ್ರನನ್ನು ನೆನಪಿಸಿಕೊಂಡು ಗದ್ಗದಿತರಾದ ಸಚಿವರು, ‘ನನ್ನ ಮಗ ಆಕಾಶ್ ಕಿಶೋರ್​ ಅತಿಯಾಗಿ ಮದ್ಯಪಾನ ಮಾಡುತ್ತಿದ್ದ. ಸ್ನೇಹಿತರೊಂದಿಗೆ ಹೋಗುವುದು, ಕುಡಿಯುವುದು ವಿಪರೀತವಾಗಿತ್ತು. ಅವನಿಗೆ ಈ ಚಟ ಬಿಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿದೆವು. ಮಧ್ಯವರ್ಜನ ಶಿಬಿರಕ್ಕೂ ಸೇರಿಸಿದೆವು. ಅಲ್ಲಿ ಸೇರಿಸಿದರೆ ಆತ ಖಂಡಿತವಾಗಿಯೂ ಮದ್ಯ ವರ್ಜಿಸುತ್ತಾನೆ ಎಂಬುದು ನಮ್ಮ ಅನಿಸಿಕೆಯಾಗಿತ್ತು. ಅಂತೆಯೇ ಒಮ್ಮೆ ಮದ್ಯವನ್ನು ಬಿಟ್ಟಿದ್ದ. ನಮಗೂ ಖುಷಿಯಾಯಿತು. ಆತನ ಮದುವೆಯನ್ನೂ ಮಾಡಿದೆವು. ಆದರೆ ದುರದೃಷ್ಟ, ಮತ್ತೆ ಯಥಾ ಪ್ರಕಾರ ಮದ್ಯಪಾನ ಪ್ರಾರಂಭಿಸಿದ್ದ. ಅನಾರೋಗ್ಯಕ್ಕೀಡಾಗಿ 2020ರ ಅಕ್ಟೋಬರ್​ನಲ್ಲಿ ಮೃತಪಟ್ಟ. ನಾನಾಗ ಸಂಸದನಾಗಿದ್ದೆ. ಎಷ್ಟೇ ಪ್ರಯತ್ನಪಟ್ಟರೂ ಅವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆತ ಸಾಯುವಾಗ ಅವನ ಮಗನಿಗೆ ಎರಡು ವರ್ಷ’ ಎಂದು ಹೇಳಿದರು.

ಕುಡುಕರನ್ನು ಮದುವೆಯಾಗಬೇಡಿ ಎಂದು ಮಹಿಳೆಯರಿಗೆ ಸಲಹೆ ಕೊಟ್ಟ ಕೇಂದ್ರ ಸಚಿವರು, ‘ನಿಮ್ಮ ಹೆಣ್ಣುಮಕ್ಕಳನ್ನು ಯಾವ ಕಾರಣಕ್ಕೂ ಮದ್ಯವ್ಯಸನಿಗಳಿಗೆ ಮದುವೆ ಮಾಡಿ ಕೊಡಬೇಡಿ’ ಎಂದು ಪಾಲಕರಿಗೂ ಕಿವಿಮಾತು ಹೇಳಿದರು. ಅಷ್ಟೇ ಅಲ್ಲ, ‘ತಂಬಾಕು, ಸಿಗರೇಟ್​, ಬೀಡಿಗಳೂ ಒಳ್ಳೆಯದಲ್ಲ. ಕ್ಯಾನ್ಸರ್​ಗೆ ಕಾರಣವಾಗುತ್ತವೆ. ಕ್ಯಾನ್ಸರ್​ನಿಂದ ಶೇ.80ರಷ್ಟು ಸಾವು ಆಗುತ್ತಿರುವುದು ಈ ಬೀಡಿ, ಸಿಗರೇಟ್​, ತಂಬಾಕಿನಿಂದಲೇ’ ಎಂದೂ ಹೇಳಿದರು.

ಇದನ್ನೂ ಓದಿ: ಕೇಂದ್ರ ಸಚಿವರ ಸೋದರಳಿಯ ಅನುಮಾನಾಸ್ಪದವಾಗಿ ಸಾವು; ಕೇಸ್​ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸ್​

Exit mobile version