ಮುಂಬಯಿ: ಇಂದು ಬಹುಮತ ಸಾಬೀತುಪಡಿಸಿದ ಏಕನಾಥ ಶಿಂಧೆ ವಿಧಾನಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದರು. ಶಿವಸೇನೆಯಿಂದ ತಾನು ಬಂಡಾಯವೆದ್ದಿದ್ದನ್ನು ಮತ್ತೆಮತ್ತೆ ಸಮರ್ಥಿಸಿಕೊಂಡರು. ʼ ಪಕ್ಷಕ್ಕೆ ವಿಶ್ವಾಸಘಾತುಕತನ ತೋರಬೇಕು ಎಂಬ ಆಸೆ ನನಗೂ ಇರಲಿಲ್ಲ. ನಂಬಿಕೆ ದ್ರೋಹ ಎಂಬುದು ನನ್ನ ರಕ್ತದಲ್ಲಿಯೂ ಇಲ್ಲ. ಆದರೆ 2019ರ ಚುನಾವಣೆ ಫಲಿತಾಂಶ ಬಂದು, ಮಹಾ ವಿಕಾಸ ಅಘಾಡಿ ಸರ್ಕಾರ ರಚನೆಯಾದಾಗಿನಿಂದಲೂ ನನಗಾದ ಅವಮಾನಗಳು ಅಷ್ಟಿಷ್ಟಲ್ಲ. ಆ ಅಪಮಾನಕ್ಕೆ ನಾನು ಉತ್ತರ ಕೊಡಬೇಕಿತ್ತುʼ ಎಂದು ಹೇಳಿದರು.
ʼ2019ರಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯಾದಾಗ ಮುಖ್ಯಮಂತ್ರಿ ಹುದ್ದೆಗೆ ನನ್ನ ಹೆಸರೇ ಕೇಳಿಬಂದಿತ್ತು. ನನ್ನನ್ನೇ ಮುಖ್ಯಮಂತ್ರಿ ಮಾಡುವುದು ಎಂದಾಗಿತ್ತು. ಆದರೆ ಆಗ ಅಜಿತ್ ಪವಾರ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಉದ್ಧವ್ ಠಾಕ್ರೆಯನ್ನು ಸಿಎಂ ಮಾಡಲಾಯಿತು. ಆದರೆ ಬಳಿಕ ಗೊತ್ತಾಯಿತು ಅಜಿತ್ ಪವಾರ್‌ಗೆ ಇಷ್ಟವಿತ್ತು ಆದರೆ ನನ್ನದೇ ಪಕ್ಷದ ಕೆಲವರು, ಅಜಿತ್ ಪವಾರ್ ಮೂಲಕ ಹೇಳಿಸಿದ್ದರು ಎಂಬುದು. ಮುಂದೊಂದು ದಿನ ಅಜಿತ್ ಪವಾರ್ ಅವರೇ ನನಗಿದನ್ನು ಹೇಳಿದರು. ಅದೇನೇ ಇದ್ದರೂ ನಾನು ಠಾಕ್ರೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದೆ. ಆದರೆ ಮುಂದೆ ನಮಗೆ ಸಿಕ್ಕಿದ್ದೆಲ್ಲ ಬರೀ ಅವಮಾನ, ನಿರ್ಲಕ್ಷ್ಯʼ ಎಂದು ಏಕನಾಥ ಶಿಂಧೆ ತಿಳಿಸಿದರು.
ಉದ್ಧವ್ ಫೋನ್ ಮಾಡಿದ್ದರು
ಹಾಗೇ, ಪ್ರತಿಪಕ್ಷಗಳ ಶಾಸಕರತ್ತ ನೋಡಿ ಮಾತನಾಡಿದ ಏಕನಾಥ ಶಿಂಧೆ, ʼಇದೆಲ್ಲ ಏನಾಯಿತೋ ಅದನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಮಹಾ ವಿಕಾಸ ಅಘಾಡಿ ಮೈತ್ರಿಯಿಂದ ನಮ್ಮ ಶಿವಸೇನೆಯ ಅನೇಕ ಶಾಸಕರು ಅಸಮಾಧಾನಗೊಳ್ಳುವಂತಾಯ್ತು. ಯಾವತ್ತಿದ್ದರೂ ಬಿಜೆಪಿಯೇ ನಮ್ಮ ನಿಜವಾದ ಮೈತ್ರಿ ಪಕ್ಷʼ ಎಂದು ಹೇಳಿದರು. ಹಾಗೇ, ಬಂಡಾಯವೆದ್ದು ಹೋದನಂತರ ನನಗೆ ನಿತ್ಯವೂ ಹಲವು ಕರೆ ಮಾಡುತ್ತಿದ್ದರು. ಸಾಮಾನ್ಯ ಜನರೂ ಫೋನ್ ಮಾಡಿ ಬೆಂಬಲ ಸೂಚಿಸಿದರು. ಉದ್ಧವ್ ಠಾಕ್ರೆಯವರೂ ಕರೆ ಮಾಡಿದ್ದರು. ಎಲ್ಲಿಗೆ ಹೋಗುತ್ತಿದ್ದೀರಿ, ಯಾವಾಗ ಹಿಂದಿಗುತ್ತೀರಿ ಎಂದು ಪ್ರಶ್ನಿಸಿದರು. ಅವರು ಕೇಳಿದ್ದಕ್ಕೆಲ್ಲ ನಾನು ಗೊತ್ತಿಲ್ಲ ಎಂದೇ ಉತ್ತರಿಸಿದ್ದೆʼ ಎಂದೂ ಹೇಳಿದರು.
ಇದನ್ನೂ ಓದಿ: ಬೋಟ್ ದುರಂತದಲ್ಲಿ ಮೃತಪಟ್ಟ ತನ್ನಿಬ್ಬರು ಮಕ್ಕಳನ್ನು ನೆನೆದು ವಿಧಾನಸಭೆಯಲ್ಲಿ ಕಣ್ಣೀರಿಟ್ಟ ಸಿಎಂ ಶಿಂಧೆ
ನಾವೆಲ್ಲ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರು ಅಲ್ಲ. ಈಗ ಒಬ್ಬ ಸಾಮಾನ್ಯ ವ್ಯಕ್ತಿಯೂ ಮುಖ್ಯಮಂತ್ರಿಯಾಗಬಹುದು. ಇದು ಚಾಯ್‌ವಾಲಾಗಳ, ರಿಕ್ಷಾವಾಲಾ, ತರಕಾರಿ ವ್ಯಾಪಾರಿಗಳು, ರೈತರ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಇವತ್ತಿಗೂ ತಮ್ಮನ್ನು ತಾವು ಚಾಯ್‌ವಾಲಾ ಎಂದೇ ಕರೆದುಕೊಳ್ಳುತ್ತಾರೆ. ಇಂಥ ಕೆಲಸ ಮಾಡುವುದರಲ್ಲಿ ಏನಾದರೂ ತಪ್ಪಿದೆಯಾ? ಎಂದು ಶಿಂಧೆ ಪ್ರಶ್ನಿಸಿದರು.
ಇದನ್ನೂ ಓದಿ: ಸಿಎಂ ಏಕನಾಥ ಶಿಂಧೆಯನ್ನು ಶಿವಸೇನೆಯ ಎಲ್ಲ ಹುದ್ದೆಗಳಿಂದ ವಜಾಗೊಳಿಸಿದ ಉದ್ಧವ್ ಠಾಕ್ರೆ