ರಾಂಚಿ: ಜಾರ್ಖಂಡ್ನಲ್ಲಿ ಕೂಡ ರಾಜಕೀಯ ಸ್ಥಿತಿ ಸರಿಯಾಗಿಲ್ಲ. ಹೇಮಂತ್ ಸೊರೆನ್ ಮೇಲೆ ಚುನಾವಣಾ ಆಯೋಗ ಹಾಗೂ ರಾಜ್ಯಪಾಲರ ಕೆಂಗಣ್ಣು ಬಿದ್ದಿದೆ. ಅವರ ವಿರುದ್ಧ ಕಲ್ಲು ಗಣಿಗಾರಿಕೆ ಗುತ್ತಿಗೆ ವಿಸ್ತರಿಸಿಕೊಂಡ ಆರೋಪ ಸಾಬೀತಾಗಿರುವುದರಿಂದ ಅವರನ್ನು ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗ ಅಲ್ಲಿನ ರಾಜ್ಯಪಾಲರಿಗೆ ಹೇಳಿತ್ತು. ಆದರೆ ಇದುವರೆಗೂ ಅನರ್ಹತೆ ಆದೇಶವೇನೂ ಹೊರಬಿದ್ದಿಲ್ಲ. ಇದೆಲ್ಲದರ ಮಧ್ಯೆ ಮೂರು ದಿನಗಳ ಹಿಂದೆ ಜಾರ್ಖಂಡ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿಶ್ವಾಸ ಮತ ಯಾಚಿಸಿ, ಬಹುಮತ ಸಾಬೀತು ಪಡಿಸಿದ್ದಾರೆ.
ಹೀಗಿರುವಾಗ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ, ಬಸಂತ್ ಸೊರೆನ್ ಅವರು ದೆಹಲಿಗೆ ಭೇಟಿ ಕೊಟ್ಟಿದ್ದರು. ಅಲ್ಲಿಂದ ಬಂದವರು ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರ ಡುಮ್ಕಾದ ಖಿಜುರಿಯಾದಲ್ಲಿರುವ ನಿವಾಸಕ್ಕೆ ತೆರಳಿದ್ದರು. ಅಲ್ಲಿ ಸುದ್ದಿಗಾರರೊಂದಿಗೆ ವಿವಿಧ ವಿಷಯಗಳನ್ನು ಮಾತನಾಡುತ್ತಿದ್ದಾಗ, ಪತ್ರಕರ್ತರೊಬ್ಬರು ಸಹಜವಾಗಿ ನಿಮ್ಮ ದೆಹಲಿ ಭೇಟಿಗೆ ಕಾರಣವೇನು ಎಂದು ಕೇಳಿದ್ದಾರೆ. ಆದರೆ ಆ ಪ್ರಶ್ನೆಗೆ ಬಸಂತ್ ಸೊರೆನ್ ವಿಲಕ್ಷಣವಾದ ಉತ್ತರವನ್ನು ಕೊಟ್ಟು ಸುದ್ದಿಯಾಗಿದ್ದಾರೆ. ‘ನನಗೆ ಚಡ್ಡಿ ಕೊಂಡುಕೊಳ್ಳಬೇಕಿತ್ತು. ಅದನ್ನು ಖರೀದಿಸಲೆಂದೇ ದೆಹಲಿಗೆ ಹೋಗಿದ್ದೆ’ ಎಂದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಜಾರ್ಖಂಡ್ ರಾಜಕೀಯ ಬೆಳವಣಿಗೆಗಳು ಕಳೆದ ತಿಂಗಳು ಅದೆಷ್ಟರ ಮಟ್ಟಿಗೆ ನಾಟಕೀಯ ಬೆಳವಣಿಗೆ ಪಡೆದಿದ್ದವು ಎಂಬುದನ್ನು ದೇಶವೇ ನೋಡಿದೆ. ಯುಪಿಎ ಸರ್ಕಾರದ ಶಾಸಕರೆಲ್ಲ ಕಾಂಗ್ರೆಸ್ ಆಡಳಿತ ಇರುವ ಛತ್ತೀಸ್ಗಢ್ಗೆ ಹೋಗಿದ್ದರು. ಈಗೊಂದು ವಾರದ ಹಿಂದಷ್ಟೇ ವಾಪಸ್ ರಾಜ್ಯಕ್ಕೆ ಬಂದಿದ್ದಾರೆ. ಸದ್ಯದ ಮಟ್ಟಿಗೆ ಸರ್ಕಾರ ಸೇಫ್ ಇದ್ದರೂ, ಯಾವುದೇ ಕ್ಷಣದಲ್ಲೂ ಏನಾದರೂ ಆಗಬಹುದು.
ಇದನ್ನೂ ಓದಿ: ರಾಜೀನಾಮೆ ಇಲ್ವೇ ಇಲ್ಲ; ವಿಶ್ವಾಸ ಮತ ಯಾಚಿಸಲು ಸಿದ್ಧರಾದ ಜಾರ್ಖಂಡ ಸಿಎಂ ಹೇಮಂತ್ ಸೊರೆನ್